Friday, January 18

ಒಂಭೈನೂರ ನಲ್ವತ್ತ ನಾಲ್ಕೂ...


ನಮ್ಮೂರು ಅಂತ ಹೇಳಿದ್ರೆ ಅದೊಂದು ಹಳ್ಳಿ. ಪುತ್ತೂರು ಗೊತ್ತುಂಟಲ್ಲ, ಅಲ್ಲಿಂದ ಕುಕ್ಕೆ ಸುಬ್ರಮಣ್ಯದ ಕಡೆಗೆ ಹೋಗುವಾಗ ಸಿಕ್ತದೆ ನಮ್ಮೂರು. ಆ ಹಳ್ಳಿಯ ಹೆಸರು ಮಾಡಾವು ಅಂತ. (ಜಗತ್ಪ್ರಸಿದ್ಧ ಮುತ್ತಪ್ಪರೈಗಳೂ ಮಾಡಾವಿನವರೇ, ಧೈರ್ಯ ಇದ್ರೆ ಕೇಳಿ ನೋಡಿ :-) ) ಒಂದು ದಶಕದಲ್ಲಿ ಅದ್ಭುತ ಪ್ರಗತಿ ಕಂಡ ಒಂದು ಊರು ಅದು.

ಆಗಿನ ಅಲ್ಲಿನ ಪರಿಸ್ಥಿತಿ ನೋಡಿ:
ಮಮ್ಮುಂಙಿ ಬ್ಯಾರಿಯ ಅಂಗಡಿ ಇತ್ತು, ಮನೆಯ ಪಕ್ಕದ ಕೋಣೆಯೇ (ಈಗಿನ ಕಾಲದ ಲಿವಿಂಗ್ ರೂಮು) ಅಂಗಡಿ , ಹಳ್ಳಿ ವೈದ್ಯರಾದ ಬಲ್ಯಾಯರು ಇದ್ರು, ಮಂತರಿಸುವ ಕಂಪ ರಾಮಣ್ಣ ಇದ್ರು, ಅಷ್ಟೇ. ಹೆಚ್ಚಿನ ರೋಗಗಳೆಲ್ಲ ಅವರಲ್ಲೆ ಗುಣವಾಗುತ್ತಿತ್ತು, ಅದರಿಂದಲೂ ದೊಡ್ಡ ಅನಾರೋಗ್ಯ ಬಂದರೆ ರಾಮಚಂದ್ರ ಡಾಕುಟ್ರ ಆಸ್ಪತ್ರೆ ಇತ್ತು, ಅವರು ಕೊಡುತ್ತಿದ್ದ "ಚೆಮ್ಮದ ಚೀಪೆ ಮರ್ದ್" ಎಲ್ಲದಕ್ಕೂ ಸ ’ರಾಮ’ ಬಾಣ ವಾಗುತ್ತಿತ್ತು.

ಒಂದು ಎಕ್ಷೇಂಜು ಇರ್ಲಿಲ್ಲ ನೋಡಿ, ಎಕ್ಷೇಂಜು ಅಂದ್ರೆ ದೂರವಾಣಿ ವಿನಿಮಯ ಕೇಂದ್ರ ಅಂತ. ದೂರದ ತಿಂಗಳಾಡಿಯಿಂದ ಸಂಪರ್ಕ ಬರ್ತಾ ಇದ್ದದ್ದು. ಮೂರು ಮೈಲಿ ದೂರದ ಅಂಕತ್ತಡ್ಕದಲ್ಲಿ ಒಂದು ಪೋನು
ಕನೆಕ್ಷನ್ ಇತ್ತು -ಯಸ್ಟೀಡಿ (ಯಸ್.ಟಿ.ಡಿ ಬೂತ್) ಅಂತ ಹೆಸರು. ಅಲ್ಲಿ ಸ ಹಾಗೆ, ಸಾಮಾನ್ಯವಾಗಿ ಫೋನು ಮಾಡ್ಬೇಕಾದವನ ಹತ್ರ ಒಂದು ಚೀಟು ಇರ್ತಿತ್ತು, ಅದರಲ್ಲಿ ನಂಬರು ಇರ್ತಿತ್ತು. ಆಪರೇಟರ್ ಅದನ್ನು ಒತ್ತಿ ಮಾತನಾಡ್ಳಿಕ್ಕೆ ಇವರ ಹತ್ರೆ ಕೊಡ್ತಾ ಇದ್ದದ್ದು ಕ್ರಮ. ಹೋದವನೇ ಪೋನು ನಂಬರ್ ಒತ್ತುತ್ತಾನೆಂತಾದರೆ ಅವನಿಗೆ ಗೌರವ ಸಲ್ಲಿಯೇ ಸಲ್ಲುತ್ತಿತ್ತು.
ಬಿಲ್ಲು ಸ ಹಾಗೆಯೇ, ಈಗಿನ ಹಾಗೆ ಪ್ರಿಂಟಾಗಿ ಒಪ್ಪವಾಗಿ ಬರ್ತಿರ್ಲಿಲ್ಲ. ಪ್ರಿಂಟ್ ಆಗಿ ಬರುವುದು ಪುಸ್ತಕವೋ, ಪೇಪರೋ ಅಲ್ಲ ಸರ್ಕಾರೀ ದಾಖಲೆಗಳೋ ಇತ್ಯಾದಿ ಮಾತ್ರ. ಪೋನು ಬಿಲ್ಲಿನಷ್ಟು ಸಣ್ಣವಿಷಯ ಸ ಪ್ರಿಂಟು ಆಗ್ತದೆ ಅಂತ ಗ್ರೇಶಿಯೂ ಇರಲಿಲ್ಲ. ಓಪರೇಟರ್ ನ ಹತ್ತಿರ ಒಂದು ಟೈಂಪೀಸು ಕ್ಲೋಕ್ ಇರ್ತಿತ್ತು. ಅದರಲ್ಲೇ ಸಮಯ ನೋಡಿಕೋಂಡು, ಗುಣಿಸಿ, ತನ್ನ ಮನೆಯ ತಾಪತ್ರಯಗಳನ್ನೆಲ್ಲ ನೆನೆದುಕೊಂದು ಒಂದು ಸಂಖ್ಯೆ ಹೇಳುತ್ತಿದ್ದ. ಪೋನು ಮಾಡೂದೂ ಅಪರೂಪ ಅಲ್ವಾ? ಎಷ್ಟು ಆಗ್ಭೌದು ಅಂತ ಕಲ್ಪನೆ ಇರ್ಲಿಲ್ಲ. ಹೇಳಿದ್ದನ್ನು ಕೊಟ್ಟು ಬರುತ್ತಿದ್ದರು.
ಹೆಚ್ಚಿಲ್ಲ ೧೦ ವರ್ಶದ ಹಿಂದಿನ ಮಾತು, ನನ್ನ ಅಣ್ಣ ಪುತ್ತೂರು ಕೋಲೇಜಿನಲ್ಲಿ ಪೀಯೂಸಿ ಮಾಡಿ, "ಇಂಜಿನಿಯರು ಕಲೀಲಿಕ್ಕೆ" ಅಂತ ಶಿವಮೊಗ್ಗಕ್ಕೆ ಹೋದ ಸಂದರ್ಭ. ನಮ್ಮ ಮನೆಯಲ್ಲಿ ಆಗಿನ್ನೂ ಪೋನು ಆಗಿರ್ಲಿಲ್ಲ. ಯಥಾಪ್ರಕಾರ ಅಂಕತ್ತಡ್ಕಕ್ಕೆ ಹೋಗ್ಬೇಕಿತ್ತು. ಅಂಕತ್ತಡ್ಕದ ಯಸ್ಟೀಡಿ ಬೂತು ಕೂಡಾ ಸ್ವಲ್ಪ ಆಧುನಿಕವಾಗುತ್ತಿತ್ತು.

೦೮೧೮೨... ಅಂತ ಆ ಓಬೀರಾಯನ ಕಾಲದ ತಿರುಮಣೆಯನ್ನು ತಿರುವಿ ತಿರುವಿ ಡಯಲಿಸಿ, ನಿವೃತ್ತಿಯ ಪ್ರಾಯದ ಆ ಪೋನು ಕಟಕಟನೆ ಹಲ್ಲು ಕಡಿಯುತ್ತಾ (ಪಲ್ಸ್ ಡಯಲಿಂಗ್) ಕನೆಕ್ಟ್ ಆಗುತ್ತಿತ್ತು. ನಾವು ಒತ್ತಿದ ನಂಬರು ಸರಿ ಉಂಟಾ ಇಲ್ವಾ ಅಂತ ಸ ನೋಡ್ಳಿಕ್ಕೆ ದಾರಿ ಇರ್ಲಿಲ್ಲ. ರಿಂಗ್ ಆಗ್ತಿತ್ತು, "ಹ್ಹಲೋ. . ಹಾಸ್ಟೆಲ್ ಅಲ್ವಾ?, ... ರನ್ನು ಕರೀತೀರೋ?, ೨ ನಿಮಿಷದಲ್ಲಿ ಪುನಃ ಮಾಡ್ತೇನೆ" ಅಂತ ಹೇಳಿ ಒಮ್ಮೆಗೆ ಕಟ್ ಮಾಡೂದು. ಎರಡು ನಿಮಿಷ ಬಿಟ್ಟು ಪುನಃ ಒತ್ತುದು, ರಿ-ಡಯಲಿಂಗ್ ಸ ಇರ್ಲಿಲ್ಲಾಗಿತ್ತು! "ಲೈನ್ ಬ್ಯುಸಿ" ಇದ್ರೆ, ’ಪೋನು ತಾಗುಜ್ಜಿ’ ಅಂತ ಮತ್ತೆ ಅದೇ ಕಾರ್ಯ. ಅಂತೂ ಇಂತೂ ಪೋನು ಸಿಕ್ಕಿ ಮಾತಾಡಿ ಅಪ್ಪ, ಅಮ್ಮ, ತಂಗೆ ಎಲ್ಲರ ಸುದ್ದಿ ಹೇಳಿದ ನಂತರ ’ಇನ್ನು ಬರುವ ವಾರ ಮಾತಾಡುವ’ ಅಂತ ನನ್ನ ಬೀಯಸ್ಯೇ- ಎಸ್ಸೆಲ್ಲಾರ್ ಸೈಕಲನ್ನು ಹತ್ತಿ ಪುನಹ ಮನೆಗೆ ಬರೂದು.
ಮುಂದೆ ಮನೆಗೆ ಪೋನು ಆದ ನಂತರ ಈ ಆನಂದ ಸಂಪೂರ್ಣವಾಗಿ ತಪ್ಪಿತು. :) 
ಅನಂತರ ಮೊಬೈಲ್ ಯುಗ, ಎಲ್ಲರಿಗೂ ಗೊತ್ತುಂಟು. ನಾನು ಕೋಲೇಜಿನಲ್ಲಿರುವಾಗ ಬೆಂಗ್ಳೂರಿನಲ್ಲಿ ಕೆಲಸದಲ್ಲಿದ್ದ ಅಣ್ಣ ಮನೆಗೆ ಅಂತ ಒಂದು ಮೊಬೈಲು ಕೊಟ್ಟ. ಆಗ ಪುತ್ತೂರಿನ ಪೇಟೆಯಲ್ಲಿ ರೇಂಜು ಸಿಕ್ತಿತ್ತು, ಹೊರಗೆ ಬಂದ್ರೆ ಗೋವಿಂದ! ಇನ್ನು ಮಾಡಾವಿನ ಪ್ರಶ್ನೆ ಬಿಡಿ, ಮೊಬೈಲು ಇದ್ರೆ ಸುಣ್ಣ ತುಂಬಿಸ್ಲಿಕ್ಕೆ ಕೂಡಾ ಆಗ್ತಿರ್ಲಿಲ್ಲ. ಆದ್ರು ಸ ಅನಂತ್ರ ಸಂಪರ್ಕ ತುಂಬ ಸುಲಭ ಆಯ್ತು. ಹೀಗಿದ್ದ ನಮ್ಮ ಮಾಡಾವು- ಕಳೆದ ೬ ತಿಂಗಳಿನಿಂದ ಮೊಬೈಲಿಗೆ ಪುಲ್ಲ್ ರೇಂಜು ಹತ್ತಿಸಿಕೊಂಡು ಉಂಟು. ಹತ್ತಿರದ ಸವಣೂರಿನಲ್ಲಿ ಟವರು ಆಗಿದೆ ಅಂತೆ. ಮಾಡಾವು ಎಕ್ಷ್ಚೇಂಜಿನವರೂ ಜಾಗೆ ತೆಗ್ದಿದ್ದಾರಂತೆ. ಇನ್ನು ಮಾಡಾವಿನಲ್ಲಿ ಸ ಟವರು ಆಗ್ತದೆ ಅಂತೆ.
ಮಮ್ಮುಂಙಿ ಬ್ಯಾರಿಯ ಪುಳ್ಳಿ ಮೊನ್ನೆ ಸಿಕ್ಕಿ ಹೇಳಿದ "ನನಿಗೆ ಸ ಮೊಬೈಲು ಆಗಿದೆ, ನಂಬರು ಬರ್ಕೊಳ್ಳಿ ಆಯ್ತಾ.. ಒಂಭೈನೂರ ನಲ್ವತ್ತನಾಲ್ಕೂ . . . "
ಒಂದು ಸಲ ಹಳೆಯ ಪೋನಿನ ಕಥೆಗಳೆಲ್ಲ ನೆಂಪಾಯ್ತು. ಬೆಳವಣಿಗೆ ನೋಡಿ ಖುಷಿ ಆಯ್ತು.
ಹ್ಯಾಟ್ಸಫ್ ಇಂಡಿಯಾ...

2 comments:

Sanath said...

ತು೦ಬಾ ಒಳ್ಳೇದು೦ಟು ನೀವು ಬರ್ದದ್ದು..ಈಗ ಆಶ್ಚರ್ಯ ಅಗ್ತದೆ ೧೦ ವರ್ಷದಲ್ಲಿ ಲೋಕದಲ್ಲಿ ಎ೦ತೆಲ್ಲಾ ಬದಲಾವಣೆ ಆಗಿದೆ ಅ೦ತ.

Unknown said...

ಸೂಪರ್ ವಿಷಯ••• ಬರೆದವರಾರು••••