Friday, January 18

ಭಯಂಕರ ಖಾರ ಮಾರಾಯ್ರೇ...

ಮಾನವ ಸಂಘಜೀವಿ.
ಸಂಘ ಅಂತ ಹೇಳಿದ್ರೆ ಆರೆಸ್ಸೆಸ್ಸ್ ಅಂತ ಮಾರ್ಕಿಷ್ಟುಗಳು ತಿಳ್ಕೊಳ್ತಾರೆ. 
ಒಂಟಿಜೀವಿಯಾಗಿ ಮನುಷ್ಯ ಬದುಕೂದು ಭಾರೀ ಕಷ್ಟ,ಹಿಮಾಲಯದ ತಪಸ್ವಿಗಳಂತಹವರನ್ನು ಬಿಟ್ಟು. 
ಬುದ್ಧಿ ಬೆಳವಣಿಗೆ ಆದಂದಿನಿಂದ ಸಮೂಹಮಾಧ್ಯಮದ ಪ್ರಗತಿ ಆಗಿಕೋಂಡು ಬಂತು. ತಂತ್ರಜ್ಞಾನದ ಪ್ರಗತಿಯಿಂದಾಗಿ ಇದು ಇನ್ನೂ ಬೆಳ್ದುಕೋಂಡು ಉಂಟು. ಮೊದಮೊದಲಿನ ಕೈ-ಸನ್ನೆಗಳು, ಮತ್ತೆ ಮಾತುಗಳು, ಗಿರಿಜನರ ನಗಾರಿ ಸಂಕೇತಗಳು, ಯನ್ಸೀಸಿ ಯವರ ಕಮಾಂಡುಗಳು, ನೌಕೆಯವರ ಸೆಮಫೊರ್ ಗಳು -ಎಲ್ಲವೂ ಕಮ್ಯುನಿಕೆಶನಿನ ಮೇಲೆ ಆದ ನಿರಂತರ ಪ್ರಗತಿಯ ಫಲಿತಾಂಶವೇ. ಇದೆಲ್ಲರಿಗೂ ಗೊತ್ತುಂಟು, ಹೈಸ್ಕೂಲಿನಲ್ಲಿ ಪ್ರಬಂಧ ಬರೀವಾಗ ಬಾಯಿಪಾಠ ಮಾಡಿರ್ತಾರೆ. 
ಮಂಗ್ಳೂರಿನ ನಮಿಗೆಲ್ಲ ಸಂತೋಷದ ಸುದ್ದಿ ಎಂತ ಹೇಳಿದ್ರೆ, ಎರಡು ಖಾಸಗಿ ಬಾನುಲಿ ಕೇಂದ್ರಗಳು (ರೇಡಿಯೋ ಸ್ಟೇಷನ್ ಗಳು) ಆರಂಭವಾಗಿವೆ. ಒಂದು ರೇಡಿಯೋ ಮಿರ್ಚಿ ಇನ್ನೊಂದು ಅಂಬಾನಿಯ ಬಿಗ್-ಎಫ್ ಎಮ್.

ಹೋಟೇಲಿನಲ್ಲಿ, ಆಪೀಸಿನಲ್ಲಿ, ಬಾರಿನಲ್ಲಿ, ಗಡಂಗಿನಲ್ಲಿ , ಎಲ್ಲ ಕಡೆಯಲ್ಲೂ ನಮ್ಮ ಕೇಳುಗರೇ ಇರಬೇಕೂ ಅಂತ ಕಂಬ್ಳದ ಗೋಣಗಳ ಹಾಗೆ ದಾಳಿ ಮಾಡಿಕೋಂಡು ಇದ್ದಾರೆ.

ಗಾಂಭೀರ್ಯ ಹಾಗೂ ತೂಕದ ನಿರೂಪಣೆ, ಕಾರ್ಯಕ್ರಮಗಳಿಂದಾಗಿ ಹಳ್ಳಿಗರ ಮನಸ್ಸಿನಲ್ಲಿ ಅಚ್ಚೊತ್ತಿರುವ ಆಕಾಶವಾಣಿಯ ಎದುರು ಈ ರೇಡಿಯೋಗಳ ಹಾವಳಿ ಕಂಡಾಬಟ್ಟೆ ಆಗಿ ಕಾಣ್ತಾ ಉಂಟು. ಶನಿವಾರದ "ಮಾತುಕತೆ", ಯುವರಂಗ, ಯಕ್ಶಗಾನ, ಕಾರ್ಯಕ್ರಮಗಳ ಹಾಗೆ ಇರುವ ಮಂಗ್ಳೂರು ಸಂಸ್ಕೃತಿಗೆ ಹಾಸುಹೊಕ್ಕಾಗಿರುವ ಕರ್ಯಕ್ರಮಗಳು ಆಕಾಶವಾಣಿಗೆ ತೂಕ ಕೊಡ್ತಾ ಉಂಟು. 
ರೇಡಿಯೋ ಮಿರ್ಚಿ ಯ ನಿರೂಪಣೆ ಬಹಳ ವಿಚಿತ್ರ ಕಾಣ್ಬಹುದು ನಮ್ಮ ಊರಿನ ಅಜ್ಜ - ಅಜ್ಜಿಯಂದಿರಿಗೆ. ಆ ಆರ್.ಜೆಗಳ ಕೆಲವು ಶೈಲಿ, ಸೇಲೆಗಳು ಅಂತೂ ಹಿಡಿಸಲಾರದಷ್ಟು ಒಗದಿಕೆ /ವಾಕರಿಕೆ ತರಿಸ್ತದೆ.
ಅವರು ಮೈಕ್ಕದ ಮುಂದೆ ಕೈಕ್ಕಂಜಿಗಳಂತೆ ಪೆರ್ಚಿ ಕಟ್ಟೂದು ನೋಡಿದ್ರೆ ಅದನ್ನು "ರೇಡಿಯೋ ಪೆರ್ಚಿ" ಅಂತ ಹೇಳ್ಳಿಕ್ಕೂ ಸಾಕು.
ಎಂತದ್ದೇ ಇರ್ಲಿ ಮಾರಾಯ್ರೆ, ಮಂಗ್ಳೂರಿನ ನೀರು ಕುಡಿವ ಈ ಬಾನುಲಿ ನಿಲಯಗಳು ಅಲ್ಲಿನ ನೀರು, ಮಣ್ಣು, ಸಂಸ್ಕೃತಿ ಮತ್ತೆ ಜನಜೀವನ ಬಿಂಬಿಸುವ ಹೆಚ್ಚು ಹೆಚ್ಚು ಕಾರ್ಯಕ್ರಮ ಕೊಡ್ಳಿ. ಬೆಂಗ್ಳೂರಿನ ಕೀಳು ಅಭಿರುಚಿಯ ಕಾರ್ಯಕ್ರಮದ "ಪೆರ್ಚಿ" ಗಳಾಗದೆ, ತೂಕದ, ಮನಮುದದ ಮನರಂಜನೆಯ ರೇಡಿಯೋ ಸ್ಟೇಷನ್-ಗಳು ಆಗ್ಲಿ ಅಂತ ಹಾರೈಕೆ.


ಒಂಭೈನೂರ ನಲ್ವತ್ತ ನಾಲ್ಕೂ...


ನಮ್ಮೂರು ಅಂತ ಹೇಳಿದ್ರೆ ಅದೊಂದು ಹಳ್ಳಿ. ಪುತ್ತೂರು ಗೊತ್ತುಂಟಲ್ಲ, ಅಲ್ಲಿಂದ ಕುಕ್ಕೆ ಸುಬ್ರಮಣ್ಯದ ಕಡೆಗೆ ಹೋಗುವಾಗ ಸಿಕ್ತದೆ ನಮ್ಮೂರು. ಆ ಹಳ್ಳಿಯ ಹೆಸರು ಮಾಡಾವು ಅಂತ. (ಜಗತ್ಪ್ರಸಿದ್ಧ ಮುತ್ತಪ್ಪರೈಗಳೂ ಮಾಡಾವಿನವರೇ, ಧೈರ್ಯ ಇದ್ರೆ ಕೇಳಿ ನೋಡಿ :-) ) ಒಂದು ದಶಕದಲ್ಲಿ ಅದ್ಭುತ ಪ್ರಗತಿ ಕಂಡ ಒಂದು ಊರು ಅದು.

ಆಗಿನ ಅಲ್ಲಿನ ಪರಿಸ್ಥಿತಿ ನೋಡಿ:
ಮಮ್ಮುಂಙಿ ಬ್ಯಾರಿಯ ಅಂಗಡಿ ಇತ್ತು, ಮನೆಯ ಪಕ್ಕದ ಕೋಣೆಯೇ (ಈಗಿನ ಕಾಲದ ಲಿವಿಂಗ್ ರೂಮು) ಅಂಗಡಿ , ಹಳ್ಳಿ ವೈದ್ಯರಾದ ಬಲ್ಯಾಯರು ಇದ್ರು, ಮಂತರಿಸುವ ಕಂಪ ರಾಮಣ್ಣ ಇದ್ರು, ಅಷ್ಟೇ. ಹೆಚ್ಚಿನ ರೋಗಗಳೆಲ್ಲ ಅವರಲ್ಲೆ ಗುಣವಾಗುತ್ತಿತ್ತು, ಅದರಿಂದಲೂ ದೊಡ್ಡ ಅನಾರೋಗ್ಯ ಬಂದರೆ ರಾಮಚಂದ್ರ ಡಾಕುಟ್ರ ಆಸ್ಪತ್ರೆ ಇತ್ತು, ಅವರು ಕೊಡುತ್ತಿದ್ದ "ಚೆಮ್ಮದ ಚೀಪೆ ಮರ್ದ್" ಎಲ್ಲದಕ್ಕೂ ಸ ’ರಾಮ’ ಬಾಣ ವಾಗುತ್ತಿತ್ತು.

ಒಂದು ಎಕ್ಷೇಂಜು ಇರ್ಲಿಲ್ಲ ನೋಡಿ, ಎಕ್ಷೇಂಜು ಅಂದ್ರೆ ದೂರವಾಣಿ ವಿನಿಮಯ ಕೇಂದ್ರ ಅಂತ. ದೂರದ ತಿಂಗಳಾಡಿಯಿಂದ ಸಂಪರ್ಕ ಬರ್ತಾ ಇದ್ದದ್ದು. ಮೂರು ಮೈಲಿ ದೂರದ ಅಂಕತ್ತಡ್ಕದಲ್ಲಿ ಒಂದು ಪೋನು
ಕನೆಕ್ಷನ್ ಇತ್ತು -ಯಸ್ಟೀಡಿ (ಯಸ್.ಟಿ.ಡಿ ಬೂತ್) ಅಂತ ಹೆಸರು. ಅಲ್ಲಿ ಸ ಹಾಗೆ, ಸಾಮಾನ್ಯವಾಗಿ ಫೋನು ಮಾಡ್ಬೇಕಾದವನ ಹತ್ರ ಒಂದು ಚೀಟು ಇರ್ತಿತ್ತು, ಅದರಲ್ಲಿ ನಂಬರು ಇರ್ತಿತ್ತು. ಆಪರೇಟರ್ ಅದನ್ನು ಒತ್ತಿ ಮಾತನಾಡ್ಳಿಕ್ಕೆ ಇವರ ಹತ್ರೆ ಕೊಡ್ತಾ ಇದ್ದದ್ದು ಕ್ರಮ. ಹೋದವನೇ ಪೋನು ನಂಬರ್ ಒತ್ತುತ್ತಾನೆಂತಾದರೆ ಅವನಿಗೆ ಗೌರವ ಸಲ್ಲಿಯೇ ಸಲ್ಲುತ್ತಿತ್ತು.
ಬಿಲ್ಲು ಸ ಹಾಗೆಯೇ, ಈಗಿನ ಹಾಗೆ ಪ್ರಿಂಟಾಗಿ ಒಪ್ಪವಾಗಿ ಬರ್ತಿರ್ಲಿಲ್ಲ. ಪ್ರಿಂಟ್ ಆಗಿ ಬರುವುದು ಪುಸ್ತಕವೋ, ಪೇಪರೋ ಅಲ್ಲ ಸರ್ಕಾರೀ ದಾಖಲೆಗಳೋ ಇತ್ಯಾದಿ ಮಾತ್ರ. ಪೋನು ಬಿಲ್ಲಿನಷ್ಟು ಸಣ್ಣವಿಷಯ ಸ ಪ್ರಿಂಟು ಆಗ್ತದೆ ಅಂತ ಗ್ರೇಶಿಯೂ ಇರಲಿಲ್ಲ. ಓಪರೇಟರ್ ನ ಹತ್ತಿರ ಒಂದು ಟೈಂಪೀಸು ಕ್ಲೋಕ್ ಇರ್ತಿತ್ತು. ಅದರಲ್ಲೇ ಸಮಯ ನೋಡಿಕೋಂಡು, ಗುಣಿಸಿ, ತನ್ನ ಮನೆಯ ತಾಪತ್ರಯಗಳನ್ನೆಲ್ಲ ನೆನೆದುಕೊಂದು ಒಂದು ಸಂಖ್ಯೆ ಹೇಳುತ್ತಿದ್ದ. ಪೋನು ಮಾಡೂದೂ ಅಪರೂಪ ಅಲ್ವಾ? ಎಷ್ಟು ಆಗ್ಭೌದು ಅಂತ ಕಲ್ಪನೆ ಇರ್ಲಿಲ್ಲ. ಹೇಳಿದ್ದನ್ನು ಕೊಟ್ಟು ಬರುತ್ತಿದ್ದರು.
ಹೆಚ್ಚಿಲ್ಲ ೧೦ ವರ್ಶದ ಹಿಂದಿನ ಮಾತು, ನನ್ನ ಅಣ್ಣ ಪುತ್ತೂರು ಕೋಲೇಜಿನಲ್ಲಿ ಪೀಯೂಸಿ ಮಾಡಿ, "ಇಂಜಿನಿಯರು ಕಲೀಲಿಕ್ಕೆ" ಅಂತ ಶಿವಮೊಗ್ಗಕ್ಕೆ ಹೋದ ಸಂದರ್ಭ. ನಮ್ಮ ಮನೆಯಲ್ಲಿ ಆಗಿನ್ನೂ ಪೋನು ಆಗಿರ್ಲಿಲ್ಲ. ಯಥಾಪ್ರಕಾರ ಅಂಕತ್ತಡ್ಕಕ್ಕೆ ಹೋಗ್ಬೇಕಿತ್ತು. ಅಂಕತ್ತಡ್ಕದ ಯಸ್ಟೀಡಿ ಬೂತು ಕೂಡಾ ಸ್ವಲ್ಪ ಆಧುನಿಕವಾಗುತ್ತಿತ್ತು.

೦೮೧೮೨... ಅಂತ ಆ ಓಬೀರಾಯನ ಕಾಲದ ತಿರುಮಣೆಯನ್ನು ತಿರುವಿ ತಿರುವಿ ಡಯಲಿಸಿ, ನಿವೃತ್ತಿಯ ಪ್ರಾಯದ ಆ ಪೋನು ಕಟಕಟನೆ ಹಲ್ಲು ಕಡಿಯುತ್ತಾ (ಪಲ್ಸ್ ಡಯಲಿಂಗ್) ಕನೆಕ್ಟ್ ಆಗುತ್ತಿತ್ತು. ನಾವು ಒತ್ತಿದ ನಂಬರು ಸರಿ ಉಂಟಾ ಇಲ್ವಾ ಅಂತ ಸ ನೋಡ್ಳಿಕ್ಕೆ ದಾರಿ ಇರ್ಲಿಲ್ಲ. ರಿಂಗ್ ಆಗ್ತಿತ್ತು, "ಹ್ಹಲೋ. . ಹಾಸ್ಟೆಲ್ ಅಲ್ವಾ?, ... ರನ್ನು ಕರೀತೀರೋ?, ೨ ನಿಮಿಷದಲ್ಲಿ ಪುನಃ ಮಾಡ್ತೇನೆ" ಅಂತ ಹೇಳಿ ಒಮ್ಮೆಗೆ ಕಟ್ ಮಾಡೂದು. ಎರಡು ನಿಮಿಷ ಬಿಟ್ಟು ಪುನಃ ಒತ್ತುದು, ರಿ-ಡಯಲಿಂಗ್ ಸ ಇರ್ಲಿಲ್ಲಾಗಿತ್ತು! "ಲೈನ್ ಬ್ಯುಸಿ" ಇದ್ರೆ, ’ಪೋನು ತಾಗುಜ್ಜಿ’ ಅಂತ ಮತ್ತೆ ಅದೇ ಕಾರ್ಯ. ಅಂತೂ ಇಂತೂ ಪೋನು ಸಿಕ್ಕಿ ಮಾತಾಡಿ ಅಪ್ಪ, ಅಮ್ಮ, ತಂಗೆ ಎಲ್ಲರ ಸುದ್ದಿ ಹೇಳಿದ ನಂತರ ’ಇನ್ನು ಬರುವ ವಾರ ಮಾತಾಡುವ’ ಅಂತ ನನ್ನ ಬೀಯಸ್ಯೇ- ಎಸ್ಸೆಲ್ಲಾರ್ ಸೈಕಲನ್ನು ಹತ್ತಿ ಪುನಹ ಮನೆಗೆ ಬರೂದು.
ಮುಂದೆ ಮನೆಗೆ ಪೋನು ಆದ ನಂತರ ಈ ಆನಂದ ಸಂಪೂರ್ಣವಾಗಿ ತಪ್ಪಿತು. :) 
ಅನಂತರ ಮೊಬೈಲ್ ಯುಗ, ಎಲ್ಲರಿಗೂ ಗೊತ್ತುಂಟು. ನಾನು ಕೋಲೇಜಿನಲ್ಲಿರುವಾಗ ಬೆಂಗ್ಳೂರಿನಲ್ಲಿ ಕೆಲಸದಲ್ಲಿದ್ದ ಅಣ್ಣ ಮನೆಗೆ ಅಂತ ಒಂದು ಮೊಬೈಲು ಕೊಟ್ಟ. ಆಗ ಪುತ್ತೂರಿನ ಪೇಟೆಯಲ್ಲಿ ರೇಂಜು ಸಿಕ್ತಿತ್ತು, ಹೊರಗೆ ಬಂದ್ರೆ ಗೋವಿಂದ! ಇನ್ನು ಮಾಡಾವಿನ ಪ್ರಶ್ನೆ ಬಿಡಿ, ಮೊಬೈಲು ಇದ್ರೆ ಸುಣ್ಣ ತುಂಬಿಸ್ಲಿಕ್ಕೆ ಕೂಡಾ ಆಗ್ತಿರ್ಲಿಲ್ಲ. ಆದ್ರು ಸ ಅನಂತ್ರ ಸಂಪರ್ಕ ತುಂಬ ಸುಲಭ ಆಯ್ತು. ಹೀಗಿದ್ದ ನಮ್ಮ ಮಾಡಾವು- ಕಳೆದ ೬ ತಿಂಗಳಿನಿಂದ ಮೊಬೈಲಿಗೆ ಪುಲ್ಲ್ ರೇಂಜು ಹತ್ತಿಸಿಕೊಂಡು ಉಂಟು. ಹತ್ತಿರದ ಸವಣೂರಿನಲ್ಲಿ ಟವರು ಆಗಿದೆ ಅಂತೆ. ಮಾಡಾವು ಎಕ್ಷ್ಚೇಂಜಿನವರೂ ಜಾಗೆ ತೆಗ್ದಿದ್ದಾರಂತೆ. ಇನ್ನು ಮಾಡಾವಿನಲ್ಲಿ ಸ ಟವರು ಆಗ್ತದೆ ಅಂತೆ.
ಮಮ್ಮುಂಙಿ ಬ್ಯಾರಿಯ ಪುಳ್ಳಿ ಮೊನ್ನೆ ಸಿಕ್ಕಿ ಹೇಳಿದ "ನನಿಗೆ ಸ ಮೊಬೈಲು ಆಗಿದೆ, ನಂಬರು ಬರ್ಕೊಳ್ಳಿ ಆಯ್ತಾ.. ಒಂಭೈನೂರ ನಲ್ವತ್ತನಾಲ್ಕೂ . . . "
ಒಂದು ಸಲ ಹಳೆಯ ಪೋನಿನ ಕಥೆಗಳೆಲ್ಲ ನೆಂಪಾಯ್ತು. ಬೆಳವಣಿಗೆ ನೋಡಿ ಖುಷಿ ಆಯ್ತು.
ಹ್ಯಾಟ್ಸಫ್ ಇಂಡಿಯಾ...

ಉಡುಪಿಯ ಪರ್ಯಾಯದ ಬಗ್ಗೆ :

ಉಡುಪಿ ಶ್ರೀಕೃಷ್ಣಾ. . . ನೋಡಿಕೋಂಡು ಇದ್ದ ಹಾಗೇ ಎಂತ ಆಗಿ ಹೋಯ್ತು ಉಡುಪಿಯಲ್ಲಿ.., ಛೇ. . . ಕಳೆದ ಒಂದು ತಿಂಗಳಿಂದ ಆಲೋಚನೆ ಬರ್ತಿತ್ತು, ಈ ವಿಷಯ ಬರೀಬೇಕು ಅಂತ. ಯಾವ ಟೀವಿ ಹಾಕಿದ್ರೂ ಹೆಡ್ ಲೈನ್ಸ್ ಒಂದೇ - ಪರ್ಯಾಯ ಬಿಕ್ಕಟ್ಟು. ಯಾವಗ್ಲೂ ಹಾಗೇ, ಅರ್ಧ ಬಿಕ್ಕಟ್ಟು ಮಾಧ್ಯಮದವರದ್ದು, ಅರ್ಧ ನಿಜವಾದ್ದು. ಮಾಧ್ಯಮದವರು ವಾಣಿಜ್ಯಿಕವಾಗಿ ತಮ್ಮ ಖಿime Sಟoಣ ಗಳನ್ನು ಮಾರಿಕೊಂಡು ಇರ್ತಾರೆ. ಆ ಹೊತು ತುಂಬಿಸ್ಬೇಕಲ್ಲ, ಅದ್ಕೆ ಹೀಗೇ ಎನಾದ್ರು ಸುದ್ದಿಗಳನ್ನು ಹುಡುಕ್ತಾರೆ. ಅಷ್ಟೆ. ಎ ಅನಾದಿ ಕಾಲದಲ್ಲಿ ಮಧ್ವಾಚಾರ್ಯರು ಮಧ್ವತತ್ವ ಪ್ರಚಾರಕ್ಕೇಂತ, ಮುಖ್ಯವಾಗಿ ಧರ್ಮದ ಉಳಿವಿಗಾಗಿ ಅನೇಕ ಕೈಂಕರ್ಯ ಮಾಡಿದ್ರು. ಅದ್ರಲ್ಲಿ ಬಹುಮುಖ್ಯವಾದ ಕೆಲಸ ಎಂತಹೇಳಿದ್ರೆ, ತಮ್ಮ ಕರ್ಮಭೂಮಿ ಆದ ಉಡುಪಿಯ ಸುತ್ತುಮುತ್ತಲಿನ ೮ ಊರುಗಳಲ್ಲಿ ಮಠಗಳನ್ನು ಸ್ಥಾಪಿಸಿ, ತಮ್ಮ ಶಿಷ್ಯರನ್ನು ಅಲ್ಲಿ ನೆಲೆಗೊಳಿಸಿ ಶ್ರೀಹರಿಯ ಸರ್ವೋತ್ತಮತ್ವವನ್ನು ಸಾರಲು ಮೊದಲು ಮಾಡಿದ್ದು. ಉಡುಪಿಯ ಶ್ರೀಕೃಷ್ಣನ ದೇವಾಲಯದ ಆವರಣದಲ್ಲಿ ಅದೇ ೮ ಮಠಗಳ ಶಾಖೆಗಳನ್ನು ಆರಂಭಿಸಿ ಸಮುಷ್ಟಿಗೊಳಿಸಿದ್ರು. ಶತಮಾನಗಳ ಕಾಲದಿಂದ ಅದು ಸರಿಯಾಗಿ ನಡೀತಾ ಉಂಟು.. ೮ ಮಠಗಳು, ಮತ್ತು ಒಂದು ಮುಖ್ಯ ಶ್ರೀಕೃಷ್ಣ ಸಾನ್ನಿಧ್ಯ. ಎಲ್ಲ ಯತಿಗಳೂ ಸಮಾನ. ಅದಕ್ಕೇ ರೂಪುಗೊಂಡದ್ದು ಈಗ ಅಸ್ತಿತ್ವದಲ್ಲಿರುವಂತ, ಪ್ರಸ್ತುತ ಸುದ್ದಿಯಲ್ಲಿರುವ ಪರ್ಯಾಯ . ಆವರ್ತನಾ ವಿಧಾನದಲ್ಲಿ ಎಲ್ಲ ೮ ಮಠಗಳೂ ಎರಡೆರಡು ವರ್ಷ ಉಡುಪಿ ಶ್ರೀಕೃಷ್ಣನ ಪೂಜಾಧಿಕಾರ. ಪ್ರತಿ ೧೬ ವರ್ಷಕ್ಕೊಮ್ಮೆ ಅಧಿಕಾರ ಪುನರಾವರ್ತನೆ. ಜನೆವರಿ ೧೭ ರ ಸಮಯಕ್ಕೆ ಆ ಸುಸಮಯ ಬರ್ತದೆ- ಸಾಮಾನ್ಯವಾಗಿ. ಆದ್ರೆ ಈ ಸಲ ಸ್ವಲ್ಪ ಗಂಭೀರ ವಿಷಯವೇ ಮಾರಾಯ್ರೇ. . . ಪುತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರರು ಕ್ರೃಷ್ಣಾಪುರ ಯತಿಗಳಿಂದ ಶ್ರೀಕೃಷ್ಣ ಪೂಜಾ ಅಧಿಕಾರ ಪಡೆಯುವ ಸಂಕ್ರಮಣ ಆಗ್ಬೇಕಾದದ್ದು. ಪರ್ಯಾಯ ಅಂದ್ರೆ ಶುಭ-ಸಂಭ್ರಮ ಸಡಗರದ ಹಬ್ಬದ ವಾತಾವರಣ ಉಡುಪಿಯ ಆದ್ಯಂತ. ವಿಷಯ ಇರೂದು ಅಲ್ಲೇ ನೋಡಿ, ಪುತ್ತಿಗೆ ಶ್ರೀಗಳು ಮೊನ್ನೆ ಮೊನ್ನೆ ತಮ್ಮ ವಿದೇಶ ಪ್ರಯಾಣ ಮುಗಿಸಿ ಅದರ ಎeಣ ಐಚಿg ಕಳಿಯುವ ಮೊದ್ಲೇ ಪರ್ಯಾಯದ ಬಗ್ಗೆ ಹೇಳಿಕೆ ಸುರು ಮಾಡಿದ್ರು ನೋಡಿ. ಎಲ್ಲ ಪತ್ರಿಕೆಗಳಲ್ಲೂ ಹಿರಿಯ ಪೇಜಾವರರ ಸಹಿತ ಉಳಿದ ಮಠಗಳ ಬಗ್ಗೆ ಮಡಿವಾದಿಗಳು ಎನ್ನಿಸುವ ಪ್ರಯತ್ನ. ಪೀತಪತ್ರಿಕೆಗಳಂತೂ - ಹೇಳಿ ಸುಖ ಇಲ್ಲ -ಅಷ್ಟೂ ಬಾಲಿಷ ವಾಕ್ಯರಚನೆಗಳು. ಐ ವಿವೇಕಾನಂದರಿಗೆ ಸಮೀಕರಿಸಿದ ಪುತ್ತಿಗೆಯವರ ಬಗೆಗಿನ ಮಾತುಗಳು, ಭಾರತದ ಧಾರ್ಮಿಕ ರಾಯಭಾರಿ , ಹಿಂದೂ ಧರ್ಮದ ಕಾಂತಿಯನ್ನು ಲೋಕದಲ್ಲಿ ಬೆಳಗುವವರು, ಸಮುದ್ರೋಲ್ಲಂಘನ ನಿಶಿದ್ಧ ಎಂಬುದು ಮಡಿವಂತಿಕೆ, ಇತ್ಯಾದಿ ಎಂತೆಂತದ್ದೋ . . ಇಲ್ಲಿ ಆಲೋಚಿಸಬೇಕಾದ ವಿಚಾರಗಳು ಸುಮಾರು ಉಂಟು. ಹಿಂದಿನ ಕಾಲದಲ್ಲಿ ಸಮುದ್ರ ಪ್ರಯಾಣಕ್ಕೆ ಉಪಯೋಗಿಸುತ್ತಿದ್ದ ದೋಣಿಗಳಿಗೆ ಮರಗಳ ದೀರ್ಘ ಬಾಳಿಕೆಗಾಗಿ ಮೀನಿನಿಂದ ತೆಗೆದಂತಹ ಪ್ರಾಣಿಜನ್ಯ ಕೊಬ್ಬುಗಳ ಉಪಯೋಗವಾಗ್ತಿತ್ತು. ಇದು ಶುದ್ಧ ಕ್ಕೆ ಸಾಲದು ಎಂಬ ಕಾರಣದಿಂದ ದೋಣಿ ಪ್ರ ಯಾಣ ನಿಷೇಧವಾಯಿತು. ಬೇರೆ ಹಲವು ಕಾರಣಗಳಿರ್‌ಬಹುದು, ಒಟ್ಟಿನಲ್ಲಿ ನಿಶೇಧವೆಂದರೆ ನಿಶೇಧ. ಉಳ್ಳಾಲದ ರಾಣಿ ಅಬ್ಬಕ್ಕನ ಸೈನ್ಯಕ್ಕೆ ಇದೇ ಸಮುದ್ರೋಲ್ಲಂಘನದ ತೊಂದರೆಯಿಂದ ಹಿಂದುಗಳು ಬರದೆ ಇದ್ದಾಗ ಮತಾಂತರಕ್ಕೆ ಪ್ರೋತ್ಸಾಹಿಸಿ ಆ ಮೂಲಕ ಸೈನ್ಯ ತುಂಬಿಸಬೇಕಾದ ಅನಿವಾರ್ಯತೆ ಸ್ರೃಸ್ಠಿಯಾಗಿತ್ತು. ಎಂಥ ನಾಚಿಕೆ. . .! ಈ ೨೦೦೮ ಎಂಬ ಆಧುನಿಕ ಜಗತ್ತಿನಲ್ಲಿ ದೂರವು ಬಹಳ ಹತ್ತಿರವಾಗಿದೆ. ಮಠದ ಶಿಷ್ಯರು ಲೋಕೋತ್ತರ ವಾಗಿ ಹರಡಿರುತ್ತಾರೆ. ಹಾಗಿರುವಾಗ ಮೊದಲಿನ ಕಲ್ಪನೆಗಳಿಂದ ಹೊರಬರುವ ಕ್ರಾಂತಿ ಆಗ್ಬೇಕಲ್ವಾ? ಆಗ್ಬೇಕು ಹೌದು, ಆದ್ರೆ ಅದು ಒಂದು ಅಳತೆಯಲ್ಲಿರ್ಬೇಕು. ಮಠಾಧಿಪತಿಗಳಾದಮೇಲೆ, ನಮ್ಮ ಧರ್ಮ ದ ಬಗ್ಗೆ ಒಲವಿದ್ದುಕೊಂಡು, ನಮ್ಮನ್ನು ಮೊದಲು ಉದ್ಧರಿಸಿಕೊಳ್ಳಬೇಕು. ಮೊದಲು ಭಾರತದ ಉದ್ಧಾರ, ಆಮೇಲೆ ಪ್ರಪಂಚ. ವಿವೇಕಾನಂದರು ಹೋದದ್ದು ವಿಶ್ವ ಕ್ಕೆ ಹಿಂದೂ ಧರ್ಮದ ಆಳ-ವಿಸ್ತಾರ ಪರಿಚಯ ಮಾಡ್ಳಿಕ್ಕೆ, ಭಾರತದ ಸನಾತನ ಧರ್ಮದ ಪರಿಚಯ ಮಾಡ್ಳಿಕ್ಕೆ. ಮಾಧ್ವ ತತ್ವ ಪ್ರಚಾರಕ್ಕೂ ಅಲ್ಲ, ತಮ್ಮ ಮಠದ ಏಳಿಗೆಗಾಗಿಯೂ ಅಲ್ಲ. ಅಷ್ಟಕ್ಕೂ ತಮಗಾಗಿ ಸ್ವಂತದ್ದಾದ ಮಠವೂ ಇರ್ಲಿಲ್ಲ! ಅಲ್ಲದೆ ಅಮೇರಿಕದ ಅಧ್ಯಕ್ಶರ ಭೇಟಿಗಾಗಿ ಹಾತೊರೆಯಲಿಲ್ಲ. ಶೋಕಿಗಾಗಿ ವಿದೇಶ ಪ್ರಯಾಣ ನಮಗೆ ನಿಮಗೆ ಸರಿ, ಆದರೆ ಮಠಾಧಿಪತಿಗಳಿಗೆ ಸರಿ ಹೊಂದುತ್ತದೋ? ಇಡಿಯ ಜೀವಮಾನ ಭಾರತಕ್ಕೇಂತ ಮುಡಿಪಾಗಿಟ್ಟು ೮೦ ರ ಆಸುಪಾಸಿನಲ್ಲಿಯೂ ಹದಿ ಹರೆಯದ ಉತ್ಸಾಹ ತುಂಬಿಕೊಂಡ ಪೇಜಾವರರು ಅದೇ ಕಾರಣಕ್ಕೆ ನನಗೆ ಇಷ್ಟವಾಗುತ್ತಾರೆ. ನಿಮಗೆ ನೆನ್ಪುಂಟೋ ಏನೋ, ಮೊದಲೊಮ್ಮೆ ಅವರ ಶಿಷ್ಯ ಯತಿಗಳು ವಿದೇಶ ಪ್ರಯಾಣ ಮಾಡಿದ್ದಾಗಲೂ ಪೂಜೆಗೆ ಅನುಮತಿ ಕೊಡ್ಲಿಲ್ಲ, ಈಗಲೂ ಅಷ್ಟೆ, ಅದೇ ವಾದ. ಒಂದೊಂದು ಕಂಪ್ಯೂಟರಿಗೆ ಒಂದೊಂದು ಕೀಬೋರ್ಡು ಇದ್ದ ಹಾಗೆ ಒಂದೊಂದು ಕ್ಷೇತ್ರಕ್ಕೆ ಒಂದೋಂದು ಕ್ರಮ ಇರ್ತದೆ, ಅದನ್ನು ಪಾಲಿಸೂದು ಭಾರತೀಯರ ಕ್ರಮ ಅಲ್ವಾ? ಉಡುಪಿಯ ಹಿರಿಯ ಯತಿಗಳಾದ ಅವರು ಅದಕ್ಕಾಗಿ ಹೋರಾಡುವುದ ಸರಿಯಲ್ವಾ? ೧೬ ವರ್ಷದ ಪರ್ಯಾಯ ಅವಧಿಯ ೧೪ ವರ್ಶಗಳಲ್ಲಿ ದೇಶ ವಿದೇಶ ಸುತ್ತಿ, ತಮ್ಮ, ಹಾಗೂ ಮಠದ ಏಳಿಗೆ ಮಾಡಿ, ೨ ವರ್ಶ ಪೂಜೆ ಮಾಡ್ತೇನೆ ಅಂತ ಹಠ ಹಿದಿದ್ರೆ, ಅದು ಸರಿ ಕಾಣ್ಬಹುದಾ? ಒಂದು ಮಠದ ಯತಿಗಳು, ಆ ಮಠದ ಶಾಸನಕ್ಕೆ ಬದ್ಧರಾಗಿಯೇ ಪೀಠಾರೋಹಣ ಮಾಡಿದ್ದು, ಹಾಗಿರುವಾಗ ಈಗ ರಚ್ಚೆ ಹಿಡಿದರೆ ಆಗ್ತದಾ? ಏನೇ ಇದ್ದರೂ, ಒಂದು ಮಹಾಪ್ರವಾಹ ಊರಿನ ಕೊಚ್ಚೆ ಗುಂಡಿಯನ್ನು ಮಾರ್ಗಕ್ಕೆ ತಂದು ಹಾಕಿದ ಹಾಗೆ, ಈ ಪರ್ಯಾಯ ಉಡುಪಿಯ ಆಂತರಿಕ ಸಂಬಂಧದ ಹುಳುಕುಗಳನ್ನು ಹೊರಹಾಕಿ ಜಗಜ್ಜಾಹೀರು ಮಾದಿದ್ದು ಮಾತ್ರ ಖೇದಕರ... ಅಲ್ವಾ? ಹಿರಿಯರಾದ ಪೇಜಾವರರನ್ನು ಕೆಲವರು ಖಳನಾಯಕರಂತೆ ಚಿತ್ರಿಸುವುದು ಕಂಡಾಗ ನೋವಾಯಿತು ನನಿಗೆ, ಅದಕ್ಕೆ ಇಲ್ಲಿ ಬ್ಲಾಗಿಸಿದೆ. ಆಭಿಪ್ರಾಯ ತಿಳಿಸಿ. ~~