Monday, March 9

ಮುತಾಲಿಕ್ ಮತ್ತೆ ರೇಣುಕಾ : ಉಗ್ರತ್ವದ ೨ ಮುಸುಡುಗಳು

ನಿಮಿಗೆ ಮೊನ್ನೆ ಆದ ಸಂಗತಿ ಗೊತ್ತುಂಟಲ್ಲ, ಮುತಾಲಿಕಿನ ಜೆನಗಳು ಪಬ್ಬಿಗೆ ದಾಳಿ ಮಾಡಿದ್ರು -ಅಂತ.
ಗೊತ್ತಾಗದೆ ಇರ್ಲಿಕ್ಕೆ ಸಾಧ್ಯವೇ ಇಲ್ಲ ನೋಡಿ, ಟೀವಿಯವ್ರು ಎಲ್ಲೊರು ಎಂತದ್ದೋ ಆಯ್ತು ಅಂತ ಬೊಬ್ಬೆ ಹೊಡೀಲಿಕ್ಕೆ ಸುರು ಮಾಡಿದ್ರು. ಎಂತ ಅವಸ್ಥೆ ಮಾರ್ರೆ, ಆ ಹೆಂಗಸು - ರೇಣುಕ ಇದ್ದಾಳಲ್ಲ, ಅವ್ಳಿಗೆ ಸಾ ಮರ್ಯಾದಿ ಇಲ್ಲ. ಪಿಂಕು ಪಿಂಕು ಅಂತ ಬೊಬ್ಬೆ ಹೊಡೀತಾ ಉಂಟು. ನನಿಗೆ ಅಂತೂ ಟೀವಿ ನೋಡ್ಳಿಕ್ಕೆ ಮನಸ್ಸು ಬರೂದಿಲ್ಲ.
ನಮ್ಮ ಊರಿನಲ್ಲಿ ಕೆಲಸಕ್ಕೆ ಹೋಗುವ ಮೋನಪ್ಪಣ್ಣನವ್ರ ಹತ್ರ ಕೇಳಿದ್ರೆ ಹೇಳ್ತಾರೆ. ಕುಡಿಯೂದು ಎಂತಕೆ? ಬೆಳಿಗ್ಗೆಯಿಂದ ಬೇಲೆ ಮಾಡಿ ಬಚ್ಚಿದ್ರೆ, ಸ್ವಲ್ಪ ಬಚ್ಚಲು ಕಡಿಮೆ ಆಗ್ಲಿಕ್ಕೇಂತ- ತೊಟ್ಟೆ ಗಂಗಾಸರವೋ, ಅಲ್ಲ ಗೋಂಕೆದ ಗಂಗಾಸರವೋ ಮಿನಿ ಕುಡೀತಾರೆ. ಅದು ಬಿಟ್ಟು, ಈಗದ ಮಕ್ಕಳ ಹಾಗೆ ಇಡೀ ದಿನ ಕೂತ್ಕೊಂಡು ಕುಡಿಯುದಿಲ್ಲ. ಇಡೀ ದಿನ ಕುಡಿಯುದು ಒಂದೇ ಉದ್ಯೋಗ ಅಂತ ಮಾಡ್ಳಿಕ್ಕೆ ಹೊರಟ್ರೆ, ಆದೀತೋ? ಮೋನಪ್ಪಣ್ಣ ಕುಡಿಯೂದಿಲ್ಲ ಅಂತ ಅಲ್ಲ, ಸಮಾ ಕುಡೀತಾರೆ. ಆದ್ರೆ - ಸ್ವಲ್ಪ ಹೊತ್ತು, ಗೊತ್ತು ಎಲ್ಲ ಉಂಟು. ಸಂಜೆ ಕೆಲಸ ಬಿಟ್ಟು ಬರುವಾಗ ಗಡಂಗಿಗೆ ಹೋಗಿ, ಉಪ್ಪಡ್ ನೊಟ್ಟಿಗೆ ಒಂದು ೩ ತೊಟ್ಟೆ ಮುಗಿಸ್ತಾರೆ. ಬರುವಾಗ ೧ ತೊಟ್ಟೆ ಪ್ರೀತಿಯ ಹೆಂಡ್ತಿ ಉಮ್ಮಕ್ಕನಿಗೆಸ ತರ್ತಾರೆ. :-) ಅದು ಸಮಾಜ ನಡ್ಕೊಂಡು ಬಂದ ರೀತಿ. ಅವ್ರ ಮನೆಯಲ್ಲಿ ಅಜ್ಜಿ ಸ ಹಾಗೇ ಕುಡೀತಾ ಇದ್ದದ್ದಂತೆ. ಕ್ರಮದಲ್ಲಿ.
ಶಾಲೆಗೆ ಹೋಗುವ ಹುಡುಗರು, ಶಾಲೆಗೆ ಹೋಗದ ಹುಡುಗರು ಎಲ್ಲ ಮೆಲ್ಲ ಅಪ್ಪನಿಗೆ ಕಾಣದ ಹಾಗೆ ಹಾಕ್ಲಿಕ್ಕೆ ಸುರು ಮಾಡ್ತಾರೆ. ಮಾಡಿ ಮಾಡಿ ಮಿತಿ ತಪ್ತಾರೆ. ತಂದೆಗೆ ಇದ್ದ ಕ್ರಮ ಮಗನಿಗೆ ಬರೂದಿಲ್ಲ, ಎಂತಕೇಳಿದ್ರೆ - ತಂದೆಗೆ ಹಗಲಿಡೀ ಕೆಲಸ ಇರ್ತದೆ, ಮೈ ಬಗ್ಗಿಸ್ಲಿಕ್ಕೆ. ಸಂಜೆ ಸ್ವಲ್ಪ ಹೊತ್ತು ಉಳ್ದಿರ್ತದೆ, ಕುಡೀಲಿಕ್ಕೆ - ಮತ್ತೆ ಕುಡ್ದದ್ದನು ಇಳಿಸ್ಲಿಕ್ಕೆ. ಮಗನಿಗೆ ಹಾಗಲ್ಲ. ಇಡೀ ದಿನ ಪುರುಸೊತ್ತೇ. ಮಗ ಮಲ್ಲಾಯೆ, ಬಿಡಿ. ಅಂತೂ ಒಂದು ದಿನ ಅಪ್ಪನ ಎದುರೇ ಕುಡಿಯುವ ಧೈರ್ಯ ಬರ್ತದೆ. ನನ್ನ ಮಗ ಸಣ್ಣ ಪ್ರಾಯದಲ್ಲೇ ಕುಡೀಲಿಕ್ಕೆ ಸುರು ಮಾಡಿದ ಅಂತ ಒಂದು ಬೇಜಾರು ಅಪ್ಪನಿಗೆ ಇದ್ದೇ ಇರ್ತದೆ. ಅಂತಾದ್ರಲ್ಲಿ ಮಗಳು ಕುಡೀಲಿಕ್ಕೆ ಸುರು ಮಾಡಿದ್ರೆ ಎಂತ ಕಥೆ? ತಡೀಲಿಕ್ಕೇ ಸಾದ್ಯ ಇಲ್ಲ.
ಗೋಂದೊಳು ಪೂಜೆಯ ಹಾಗೆ ಎಂತಾದ್ರು ಇದ್ರೆ ಸ್ವಲ್ಪ ಸ್ವಲ್ಪ ತೀರ್ಥ ತೆಕ್ಕೊಳ್ತಾರೆ, ಬೇರೆ ಎಂತ ಸ ಇಲ್ಲ. ಮನೆಯಲ್ಲೇ ಕುಡಿಯೂದು ಬಿಟ್ಟು ಒಂದು ಹಂತ ಮುಂದೆ ಹೋಗಿ ಗಡಂಗಿಗೆ ಹೋದರೆ ಎಂತ ಕಥೆ? ಮೋನಪ್ಪಣ್ಣನವರ ಹಾಗೆ ಸಾವಿರಾರು ಜನಗಳಿಗೆ ತಡ್ಕೊಳ್ಳಿಕೇ ಆಗೂದಿಲ್ಲ. ಯಾವ ರೀತಿ ಮೋನಪ್ಪಣ್ಣನಿಗೆ ಅವನ ಅಪ್ಪನಿಂದ ಈ ಮನಸ್ಥಿತಿ ಬಂತೋ,ಅದೇ ಮೋನಪ್ಪಣ್ಣನ ಮನಸ್ಥಿತಿ ಅವನ ಮಗನಿಗೂ ಬಂದಿರ್ತದೆ.

ಸಣ್ಣ ಪ್ರಾಯದಲ್ಲಿ ಸಂಘಕ್ಕೆ ಸೇರ್ತಾರೆ ಕೆಲವು ಜನ. ಸಂಘ ಅಂದ್ರೆ ಆರೆಸ್ಸೆಸ್. ಯೋಗ, ನಮಸ್ಕಾರ, ಬೌದ್ಧಿಕ್ - ಹೀಗೆ ಸುಮಾರು ದೇಹ-ಮನಸ್ಸು ಎರಡೂ ಗಟ್ಟಿ ಆಗುವ ಕ್ರಮಗಳು ಇರ್ತದೆ. ಇದ್ರಲ್ಲಿ ಬೆಳ್ದು ಬಂದ ಕೆಲವ್ರಿಗೆ ಇದು ಬರೀ ಚಪ್ಪೆ, ಇನ್ನೂ ಕಡ್ಪದ್ದು ಬೇಕು -ಅಂತ ಆಗ್ಲಿಕ್ಕೆ ಸುರು ಆಗ್ತದೆ. ವಿಶ್ವ ಹಿಂದೂ ಪರಿಶತ್ತು, ಅದು ಚಪ್ಪೆ ಅಂತ ಸುರು ಆದ ಮತ್ತೆ ಭಜ್ರಂಗದಲೊ, ಹೀಗೆ - ಕಡ್ಪತನದ ಹುಡುಕಾಟ ನಿರಂತರ. ಹೀಗೇ ಮೋನಪ್ಪಣ್ಣನ ಮಕ್ಕಳ ಹಾಗೆ ಇರುವ ನೂರಾರು ಅತೃಪ್ತ ಜೆನಗಳು ಒಂದು ಸೇನೆ ಕಟ್ಟಿದ್ರು - ಅದೇ ಶ್ರೀರಾಮ ಸೇನೆ. ಒಳ್ಳೆ ಉದ್ದೇಶ ಇಲ್ಲ ಅಂತ ಹೇಳೂದಿಲ್ಲ ನಾನು. ಆದ್ರೆ ಕಡ್ಪ ಜಾಸ್ತಿ ಆಗಿ ಅದು ಗೌಣ ಆಗಿ ಕಾಣ್ತದೆ.
ಸಣ್ಣ ಇರುವಾಗ ಕಾನ್ವೆಂಟು, ಮತ್ತೆ ಪ್ರೈವೇಟು ಶಾಲೆ, ಮತ್ತೆ ಹೈ-ಪೈ ಕೋಲೇಜು, ಮತ್ತೆ ಒಂದು ಒಳ್ಳೆ ಕೆಲಸ. ಒಂದು ಚೆಂದದ ಬೈಕ್ಕಿನ ಹಿಂದಿನ ಸೀಟು - ಹೀಗೆ ಬೆಳೀತಾರೆ ಕೆಲವು ಹುಡುಗಿಯರು. ಅಂತದ್ರಾಲ್ಲಿ ಒಂದು ರೇಣುಕಾ ಚೌದ್ರಿ ಕೂಡಾ ಒಂದು. ಆ ನಮುನೆಯ ಜೀವನಕ್ಕೆ ಅವ್ರು ಕೊಟ್ಟ ಹೆಸ್ರು ಸ್ವಾತಂತ್ರ್ಯ ಅಂತ. ’ಮಹಿಳಾ ವಾದ’ ಅಂತಲೂ ಹೆಸ್ರು ಉಂಟು. ಪುರುಶ ಸಮಾಜದ ಎದುರು ಚಳುವಳಿ ಅವ್ರ ಮುಖ್ಯ ಉದ್ದೇಶ. ಹಿಂದೂ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ನಡೆದು ಬಂದ ಮಹಿಳಾ ದೌರ್ಜನ್ಯದ ಬಗ್ಗೆ ಅವರ ಸಿದ್ಧ ಭಾಷಣ. ಭಾಷೆ- ಜಾಗ- ಮೈಕ್ಕ - ಸಭೆ ಬೇರೆ ಆದ್ರೂ, ಮಾತಾಡುವ ವಿಶಯ ಒಂದೇ: ಮಹಿಳೆ. ಸಮಾಜದಲ್ಲಿ ಮಹಿಳೆಗೆ ಆಗ್ತಾ ಇರುವ ಅನ್ಯಾಯದ ವಿರುದ್ಧ ಬಂಡಾಯಕ್ಕೆ ಜನರನ್ನು ತಯಾರು ಮಾಡೂದು. ಎಲ್ಲಾ ಪುರುಶರೂ ಮಾಡೂದು ಅವರ ಮನೆಯ ಮಹಿಳೆಗಾಗಿ ಅಂತ ಎಷ್ಟು ಹೇಳಿದ್ರೂ ಇವ್ರಿಗೆ ಅರ್ಥ ಆಗುದಿಲ್ಲ.
ಮಜಾ ಮಾಡಿ ಅರ್ದ ಡ್ರೆಸ್ಸಿಲ್ಲಿ ಕುಣಿದು ನಮ್ಮತನ ಹಾಳು ಮಾಡುದು ಶ್ರೀ ರಾಮ ಸೇನೆಗಂತೂ ಸರಿ ಕಾಣ್ಲಿಲ್ಲ. ರೇಣುಕನ ’ಸ್ವಾತಂತ್ರ’ ಮುತಾಲಿಕಿಗೆ ಸ್ವೇಚ್ಚಾಚಾರ ಆಗಿ ಕಂಡಿತು. ಉಮಿಲ್ ಬಡ್ದುಕೊಂಡು ಕೂತಿದ್ದ ಟೀವಿಯವ್ರಿಗೆ ಹೇಳಿ ಸೀದ ವೇನಿನಲ್ಲಿ ಹೋಗಿ ಬೊಬ್ಬೆ ಹೊಡುದ್ರು. ಟೀವಿ-೯ ಅಂತೂ ಕನಿಷ್ಠ ೧ ಲಕ್ಷ ಸರ್ತಿ ಆ ಪಬ್ಬಿನಲ್ಲಿದ್ದ ಹುಡುಗಿಯ ಅರ್ಧ ಅಂಗಿ ತೋರಿಸಿ, ಸೇನೆ ಮಾಡಿದ ಮಹಿಳೆಯ ಮೇಲಿನ ಅಗೌರವದ ಬಗ್ಗೆ ಬೊಬ್ಬೆ ಹಾಕಿತ್ತು, ಪಾಪ. ಉಳ್ದದ್ದೂ ಸ ಎಂತ ಕಮ್ಮಿ ಇಲ್ಲ ಮಾರ್ರೆ. ಈಗ ಬಂದದ್ದು ರೇಣುಕನ ಎಂಟ್ರಿ. ಸುಮಾರು ಸಮಯ ಮನೆಯಲ್ಲಿ ಕೂತು, ತಂದ ಲಿಪ್ಸ್ಟಿಕ್ಕು, ಪೌಡರು ಎಲ್ಲ ಪುಸ್ಕ ಆಗಿಕೋಂಡು ಇತ್ತು. ಇದೇ ಒಳ್ಳೆ ಸಮಯ, ಎಲ್ಲ ಪೇಪರಿನಲ್ಲಿ ಸ ಬರ್ಬೌದು ಅಂತ ರಪಕ್ಕ ಹೊರಟ್ಳು, ಗಂಡನಿಗೆ ಸ ಹೇಳದೆ.
ವೇಲೆಂಟೈನ್ಸ್ ಡೆ ಹತ್ರ ಬಂತಲ್ಲ, ಯಾರೆಲ್ಲ ಕೆಂಪು ಬಣ್ಣದ್ದು ಹಾಕ್ತಾರೋ, ಅವ್ರೆಲ್ಲ ಮುತಾಲಿಕ್ಕಿಗೆ ಕಳಿಸಿ ಅಂತ ಕರೆ ಕೊಟ್ಳು.ಚಿ, ಹೇಸಿಗೆ. ಮುತಾಲಿಕ್ ಅದಿಕ್ಕೆ - ಚ* ಕಳಿಸಿದವರಿಗೆ ಸೀರೆ ಅಂತ ಹೇಳಿದ್ರೋ, 'ರೇಣುಕ ಮಾಡಿದ್ದು ತಪ್ಪು, ಮುತಾಲಿಕ್ ಮಾಡಿದ್ದು ಸರಿ' ಅಂತ ಮಂಗ್ಳೂರಿನ ಹೆಚ್ಚಿನವ್ರಿಗೆ ಕಾಣ್ಳಿಕ್ಕೆ ಸುರು ಆಯ್ತು. ಅಂಗೈ ಅಗಲ ಇದ್ದ ವ್ಯಕ್ತಿತ್ವ ವ್ಯತ್ಯಾಸ, ಈಗ ಅಜಗಜಾಂತರ.

ನನಿಗೆ ಕಾಣುದು: ಇಬ್ರೂ ಉಗ್ರತ್ವದ ಎರಡು ಮುಸುಡುಗಳು ಅಂತ. ಅಲ್ವಾ?