Friday, January 18

ಭಯಂಕರ ಖಾರ ಮಾರಾಯ್ರೇ...

ಮಾನವ ಸಂಘಜೀವಿ.
ಸಂಘ ಅಂತ ಹೇಳಿದ್ರೆ ಆರೆಸ್ಸೆಸ್ಸ್ ಅಂತ ಮಾರ್ಕಿಷ್ಟುಗಳು ತಿಳ್ಕೊಳ್ತಾರೆ. 
ಒಂಟಿಜೀವಿಯಾಗಿ ಮನುಷ್ಯ ಬದುಕೂದು ಭಾರೀ ಕಷ್ಟ,ಹಿಮಾಲಯದ ತಪಸ್ವಿಗಳಂತಹವರನ್ನು ಬಿಟ್ಟು. 
ಬುದ್ಧಿ ಬೆಳವಣಿಗೆ ಆದಂದಿನಿಂದ ಸಮೂಹಮಾಧ್ಯಮದ ಪ್ರಗತಿ ಆಗಿಕೋಂಡು ಬಂತು. ತಂತ್ರಜ್ಞಾನದ ಪ್ರಗತಿಯಿಂದಾಗಿ ಇದು ಇನ್ನೂ ಬೆಳ್ದುಕೋಂಡು ಉಂಟು. ಮೊದಮೊದಲಿನ ಕೈ-ಸನ್ನೆಗಳು, ಮತ್ತೆ ಮಾತುಗಳು, ಗಿರಿಜನರ ನಗಾರಿ ಸಂಕೇತಗಳು, ಯನ್ಸೀಸಿ ಯವರ ಕಮಾಂಡುಗಳು, ನೌಕೆಯವರ ಸೆಮಫೊರ್ ಗಳು -ಎಲ್ಲವೂ ಕಮ್ಯುನಿಕೆಶನಿನ ಮೇಲೆ ಆದ ನಿರಂತರ ಪ್ರಗತಿಯ ಫಲಿತಾಂಶವೇ. ಇದೆಲ್ಲರಿಗೂ ಗೊತ್ತುಂಟು, ಹೈಸ್ಕೂಲಿನಲ್ಲಿ ಪ್ರಬಂಧ ಬರೀವಾಗ ಬಾಯಿಪಾಠ ಮಾಡಿರ್ತಾರೆ. 
ಮಂಗ್ಳೂರಿನ ನಮಿಗೆಲ್ಲ ಸಂತೋಷದ ಸುದ್ದಿ ಎಂತ ಹೇಳಿದ್ರೆ, ಎರಡು ಖಾಸಗಿ ಬಾನುಲಿ ಕೇಂದ್ರಗಳು (ರೇಡಿಯೋ ಸ್ಟೇಷನ್ ಗಳು) ಆರಂಭವಾಗಿವೆ. ಒಂದು ರೇಡಿಯೋ ಮಿರ್ಚಿ ಇನ್ನೊಂದು ಅಂಬಾನಿಯ ಬಿಗ್-ಎಫ್ ಎಮ್.

ಹೋಟೇಲಿನಲ್ಲಿ, ಆಪೀಸಿನಲ್ಲಿ, ಬಾರಿನಲ್ಲಿ, ಗಡಂಗಿನಲ್ಲಿ , ಎಲ್ಲ ಕಡೆಯಲ್ಲೂ ನಮ್ಮ ಕೇಳುಗರೇ ಇರಬೇಕೂ ಅಂತ ಕಂಬ್ಳದ ಗೋಣಗಳ ಹಾಗೆ ದಾಳಿ ಮಾಡಿಕೋಂಡು ಇದ್ದಾರೆ.

ಗಾಂಭೀರ್ಯ ಹಾಗೂ ತೂಕದ ನಿರೂಪಣೆ, ಕಾರ್ಯಕ್ರಮಗಳಿಂದಾಗಿ ಹಳ್ಳಿಗರ ಮನಸ್ಸಿನಲ್ಲಿ ಅಚ್ಚೊತ್ತಿರುವ ಆಕಾಶವಾಣಿಯ ಎದುರು ಈ ರೇಡಿಯೋಗಳ ಹಾವಳಿ ಕಂಡಾಬಟ್ಟೆ ಆಗಿ ಕಾಣ್ತಾ ಉಂಟು. ಶನಿವಾರದ "ಮಾತುಕತೆ", ಯುವರಂಗ, ಯಕ್ಶಗಾನ, ಕಾರ್ಯಕ್ರಮಗಳ ಹಾಗೆ ಇರುವ ಮಂಗ್ಳೂರು ಸಂಸ್ಕೃತಿಗೆ ಹಾಸುಹೊಕ್ಕಾಗಿರುವ ಕರ್ಯಕ್ರಮಗಳು ಆಕಾಶವಾಣಿಗೆ ತೂಕ ಕೊಡ್ತಾ ಉಂಟು. 
ರೇಡಿಯೋ ಮಿರ್ಚಿ ಯ ನಿರೂಪಣೆ ಬಹಳ ವಿಚಿತ್ರ ಕಾಣ್ಬಹುದು ನಮ್ಮ ಊರಿನ ಅಜ್ಜ - ಅಜ್ಜಿಯಂದಿರಿಗೆ. ಆ ಆರ್.ಜೆಗಳ ಕೆಲವು ಶೈಲಿ, ಸೇಲೆಗಳು ಅಂತೂ ಹಿಡಿಸಲಾರದಷ್ಟು ಒಗದಿಕೆ /ವಾಕರಿಕೆ ತರಿಸ್ತದೆ.
ಅವರು ಮೈಕ್ಕದ ಮುಂದೆ ಕೈಕ್ಕಂಜಿಗಳಂತೆ ಪೆರ್ಚಿ ಕಟ್ಟೂದು ನೋಡಿದ್ರೆ ಅದನ್ನು "ರೇಡಿಯೋ ಪೆರ್ಚಿ" ಅಂತ ಹೇಳ್ಳಿಕ್ಕೂ ಸಾಕು.
ಎಂತದ್ದೇ ಇರ್ಲಿ ಮಾರಾಯ್ರೆ, ಮಂಗ್ಳೂರಿನ ನೀರು ಕುಡಿವ ಈ ಬಾನುಲಿ ನಿಲಯಗಳು ಅಲ್ಲಿನ ನೀರು, ಮಣ್ಣು, ಸಂಸ್ಕೃತಿ ಮತ್ತೆ ಜನಜೀವನ ಬಿಂಬಿಸುವ ಹೆಚ್ಚು ಹೆಚ್ಚು ಕಾರ್ಯಕ್ರಮ ಕೊಡ್ಳಿ. ಬೆಂಗ್ಳೂರಿನ ಕೀಳು ಅಭಿರುಚಿಯ ಕಾರ್ಯಕ್ರಮದ "ಪೆರ್ಚಿ" ಗಳಾಗದೆ, ತೂಕದ, ಮನಮುದದ ಮನರಂಜನೆಯ ರೇಡಿಯೋ ಸ್ಟೇಷನ್-ಗಳು ಆಗ್ಲಿ ಅಂತ ಹಾರೈಕೆ.


1 comment:

Raveesh Kumar said...

ಈಗ ಮೂರ್ನೇದು ಬ೦ದಿದೆ - ಎಸ್.ಎಫ್.ಎಮ್. ಆದ್ರೆ ಎ೦ಥ ಮಾರ್ರೇ ಈ ಆರ್ ಜೆ ಗಳು ಉಪಯೋಗಿಸುವುದು ಬೆ೦ಗಳೂರು ಕನ್ನಡ. ಜಾಗತೀಕರ್‍ಅಣದ ಪರಿಣಾಮ ಅ೦ಥ ಕಾಣ್ತಾ ಇದೆ. ಕೆಲವು ಸರ್ತಿ ಇವರ ಕೋಲ ನೋಡಿದರೆ ಮ೦ಡೆ ಬೆಚ್ಚ ಆಗ್ತದೆ! :D