ಸುಮ್ಮನೆ, ಆಚೀಚೆ ಮನೆಯವ್ರು ಸೇರಿಕೊಂಡು ಮಾತಾಡ್ಲಿಕ್ಕೆ. ಎಲೆ ತಿಂದು ತುಪ್ಪಿ, ಮತ್ತೆ ತಿಂದು ತುಪ್ಪಿ, ಮತ್ತೆ ಮತ್ತೆ ತುಪ್ಪುವ ಆ ಒಂದು ಸೆಶನ್ ಉಂಟಲ್ಲ, ಆಗ ವಾಜ್ಪೇಯಿ, ಅಡ್ವಾಣಿ ಅಜ್ಜ, ಪೆರ್ನಾಂಡೀಸ್ಸು, ನೆಹರು , ಅವ್ರು, ಇವ್ರು ಎಲ್ಲರೂ ನಮ್ಮ ಪರಮಾಪ್ತರ ಹಾಗೆ ಬಂದು ಹೋಗ್ತಾರೆ. ನಿಷ್ಟುರ ಕಮೆಂಟುಗಳಿಗೆ ಹೆಸರಾದ ನಮ್ಮ ಹಳಬರು ಈ ಎಲ್ಲೊರನ್ನೂ ತರಾಟೆಗೆ ತೆಕ್ಕೊಳ್ತಾರೆ. ಅದನ್ನು ನೋಡ್ಳಿಕ್ಕೆ ನಿಮಿಗೆ ಬೇಕಾದ್ದು ತಾಳ್ಮೆ ಮಾತ್ರ!
ಈಗ ಸ ಓಟಿನ ಟೈಮು. ವಾರಾಂತ್ಯ ಊರಿಗೆ ಹೋಗಿದ್ದೆ, ಕೆಮಿಗೆ ಬಡೀತಾ ಇತ್ತು, ರಾಜಕೀಯ ವಿಮರ್ಶೆಗಳು. ನಮ್ಮ ದೇಶಕ್ಕೆ ವಾಜ್ಪೇಯಿ ಹೇಗೋ, ನಮ್ಮ ಪುತ್ತೂರಿಗೆ ರಾಮಜ್ಜ ನೂ ಹಾಗೆಯೇ. ರಾಮಜ್ಜ ಅಂದ್ರೆ, ಶ್ರಿ. ಉರಿಮಜಲು ರಾಮ ಭಟ್ ಅಂತ ಅವರ ಹೆಸರು, ಪುತ್ತೂರಿನ ಬೇರು ಬೇರು ಅರ್ದು ಕುಡಿದವರು. ಅವತ್ತು ಇಡೀ ದೇಶದಲ್ಲೇ ಕೋಂಗ್ರೇಸಿನ ಅಲೆ ಇತ್ತಲ್ವ, ನಮ್ಮ ದೇಶ ಆಳ್ಬೇಕಾದ್ರೆ ನೆಹರು ಕುಟುಂಬವೇ ಆಗ್ಬೇಕು ಅಂತ, ಆ ಟೈಮಿನಲ್ಲಿ ನಮ್ಮ ಪುತ್ತೂರಿನಲ್ಲಿ ಜನಸಂಘದ ದ್ಯೇಯ - ಉದ್ದೇಶಗಳನ್ನು ಪ್ರಚಾರ ಪಡಿಸಿದವರು, ಪುತ್ತೂರು ಮಾತ್ರ ಅಲ್ಲ ಮಾರಾಯ್ರೇ, ನಮ್ಮ ಇಡೀ ಮಂಗ್ಳೂರಿನಲ್ಲಿ ಈಗ ಇರುವ ಆರ್.ಯಸ್.ಯಸ್ , ವಿ.ಹಿಂ.ಪ , ಬಿ.ಜೆ.ಪಿ ಎಲ್ಲವೂ ಗಟ್ಟಿಗೆ ತಾಯಿಬೇರು ಬಿಡ್ಳಿಕ್ಕೆ ಕಾರಣ ಅವ್ರೇ. ಒಂದು ವಿಶಯ ಹೇಳ್ತೇನೆ, ೧೯೬೫ ರ ಹೊತ್ತಿಗೆ ಪುತ್ತೂರಿನಲ್ಲಿ ಕೋಲೇಜು ಅಂತ ಇದ್ದದ್ದು ಫಿಲೋಮಿನ ಮಾತ್ರ. ಒಂದೇ ಕೋಲೇಜು ಇದ್ದ ಕಾರಣ ಎಷ್ಟು ಕೇಳಿದ್ರೂ ನಡೀತದೆ ಅಂತ ಫೀಸು ತೆಕ್ಕೊಳ್ಳಿಗೆ ಸುರುಮಾಡಿ ಅದು ಕಂಡಾಬಟ್ಟೆ ಆಯ್ತು. ಪಾಪದವ ಕೋಲೇಜಿಗೆ ಹೋಗುದು ಹೇಗೆ? ಆಗ ಈ ರಾಮಜ್ಜನ ನೇತೃತ್ವದ ಕೆಲವು ಯುವ ಚಿಂತಕರು (ಈಗಿನ ಬುದ್ದಿಜೀವಿಗಳ ಹಾಗೆ ಅಲ್ಲ ಆಯ್ತ!) ಎಲ್ಲ ಸೇರಿ , ’ನಮಿಗೆ ಪಾಪದವರಿಗೆ ಆಗುವ ಹಾಗೆ ಒಂದು ಕೋಲೇಜು ಆಗ್ಬೇಕು’ ಅಂತ ಹಟ ತೊಟ್ಟು ಕೆಲಸ ಸುರು ಮಾಡಿದ್ರು. ಅದಿಕ್ಕೆ ಪೈಸೆ ಬೇಕಲ್ಲ, ಅವರ, ಮತ್ತೆ ಅವರ ಮಿತ್ರರ ಜಾಗೆಯ ಕ್ರಯಚ್ಚೀಟುಗಳನ್ನು ಬೇಂಕಿನಲ್ಲಿ ಇಟ್ಟು ಸಾಲ ತೆಗ್ದು, ಅವರ ಇವರ ಹತ್ತಿರ ಎಲ್ಲ ದುಡ್ಡು ಕೇಳಿ ಒಂದು ಕೋಲೇಜು ಕಟ್ಟ್ಳಿಕ್ಕೆ ಸುರು ಮಾಡಿದ್ರು. ಈಗ ಅದು ಪುತ್ತೂರಿನ ಎಲ್ಲ ಸ್ಪರ್ಧೆಗಳನ್ನೂ ಮೀರಿ ನಂಬರ್-೧ ಕೋಲೇಜು ಆಗಿ ರೈಸಿಕೊಂಡು ಉಂಟು. ಈಗ್ಲೂ ಅದನ್ನು ರಾಮಜ್ಜನ ಕೋಲೇಜು ಅಂತ ಹೇಳ್ತಾರೆ ಹಳಬ್ಬರು. ಆ ಕೋಲೇಜಿನ ಒಟ್ಟಿಗೆ ಮತ್ತೆ ೧೩ ವಿದ್ಯಾ ಸಂಸ್ಥೆ ಮಾಡಿ, ಬಾಲವಾಡಿಯಿಂದ ಇಂಜಿನಿಯರು ಕಲಿಯುವ ವರೆಗೆ ಸಾಮಾನ್ಯ ಮಕ್ಕಳಿಗೆ ಸಾ ವಿದ್ಯೆ ಸಿಕ್ಕುವ ಹಾಗೆ ಮಾಡಿ ತನ್ನ ಮೈಯಲ್ಲಿ ಇನ್ನೂ ತಾಕತ್ತು ಇರುವಾಗಲೇ ಆ ಕೋಲೇಜಿನ ಸಂಚಾಲಕತ್ವವನ್ನು ಬಿಟ್ಟು ಕೊಟ್ಟು, ಈಗ ನಮ್ಮ ನಿಮ್ಮ ಹಾಗೇ ಅದರ ಹೊಳಪನ್ನು ನೋಡ್ತಾ ಇದ್ದಾರೆ. ಸಾಯುವ ತನಕ ಕುರ್ಚಿ ಬಿಡೂದಿಲ್ಲ ಅಂತ ಹೇಳುವ ಬೇರೆ ರಾಜಕಾರಣಿಯ ಎದುರು ಇವರು ತುಂಬ ತಾತ್ವಿಕವಾಗಿ ಕಾಣ್ತಾರೆ. ಎಂತ ಹೇಳ್ತೀರಿ, ಹೌದಾ ಅಲ್ವ? ಆದ್ರೆ ಒಂದುಂಟು, ಇವ್ರಿಗೆ ಸ್ವಲ್ಪ ಹಠ ಜಾಸ್ತಿ ಮಾರಾಯ್ರೇ.. ಹಿಡಿದದ್ದನ್ನು ಬಿಡುವಂತವ್ರಲ್ಲ. ತತ್ವ ಬದಲಿಸ್ವುವವರಲ್ಲ, ಧ್ಯೇಯದೊಟ್ಟಿಗೆ ರಾಜಿ ಮಾಡಿಕೊಳ್ಳುವವರಲ್ಲ. ಈಗಿನ ರಾಜಕಾರಣಿಗಳ ಹಾಗೆ ಓತಿ ಬುದ್ದಿ ಇಲ್ಲ. ಅಷ್ಟಿದ್ದ ಕಾರಣವೇ ಅವ್ರು ಸಾಧನೆ ಮಾಡ್ಳಿಕ್ಕೆ ಆಯ್ತು, ಅಲ್ವ?
ಮೊದ್ಲು ಇವ್ರು ಓಟಿಗೆ ನಿಲ್ತಾ ಇದ್ರು ನೋಡಿ, ಸಿಕ್ಕಿಕೋಂಡು ಇದ್ದದ್ದು ೭೦೦ - ೮೦೦ ಓಟು ಆದ್ರೂ, ಕಟ್ಟಿದ ದುಡ್ಡು (ಠೇವಣಿ) ಹೋದ್ರೂ ತಲೆಬೆಶಿ ಮಾಡದೆ, ಪ್ರತೀ ಸರ್ತಿ ಕೂಡಾ ಸ್ಪರ್ಧೆ ಕೊಡ್ತಾ ಇದ್ರಲ್ಲ, ಅದಿಕ್ಕೆ ಅವ್ರ ತತ್ವ ಕಾರಣ ಅಂತ. ಹಾಗೆ ಇವ್ರು ಶಾಸಕರೂ ಆದ್ರು ಒಮ್ಮೆ. ಆಗಿನ ಕಾಲದಲ್ಲಿ ಎಲ್ಲ ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರು ’ಜನಸಂಘ’ ಅಂತ ಹೇಳೂದನ್ನು ’ರಾಮ ಭಟ್ಟ್ರ ಪಾರ್ಟಿ’ ಅಂತ ಹೇಳ್ತಾ ಇದ್ರಂತೆ. ಅಷ್ಟು ಪ್ರಭಾವ ಇತ್ತು ಅವ್ರಿಗೆ. ಅದಿರ್ಲಿ, ಅಧಿಕಾರ ದಾಹ ಅವ್ರಿಗೆ ಇರ್ಲಿಲ್ಲ ನೋಡಿ, ಮುಂದಿನ ಯುವ ನಾಯಕರನ್ನು ಬೇಗ ಬೆಳೆಸುವ ಅಂತ ಅವರಿಗೆ ವಿಶ್ವಾಸ ಬಂದ ಒಬ್ಬನನ್ನು ಮುಂದೆ ಮಾಡಿದರು. ಸ್ವತಃ ವಕೀಲರಾದ ರಾಮಜ್ಜರಿಗೆ ಕಂಡದ್ದು ಒಬ್ಬ ಯುವ ವಕೀಲನೇ. ಮುಂದಿನ ಯಮ್.ಯಲ್.ಏ ಓಟಿಗೆ ನಿಲ್ಲಿಸಿದ್ದೇ ಆ ಯುವಕನನ್ನು. ಆ ಯುವಕನ ಹೆಸ್ರು ಆಗ ಡಿ.ವಿ.ಸದಾನಂದ ಅಂತ (ಈಗ ’ಗೌಡ’ ಅಂತ ಜಾತಿ ರಾಜಕೀಯ ಕೂಡ ಬಂದಿದೆ ಬಿಡಿ). ಎಲ್ರೂ ಡೀವಿ ಅಂತ ಹೇಳ್ಲಿಕ್ಕೆ ಸುರು ಮಾಡಿದ್ರು. ಆ ಓಟಿನಲ್ಲಿ ಗೆದ್ದು, ಪುತ್ತೂರಿನ ಶಾಸಕ ಆಗಿ, ಗುರುಗಳ ಮಾರ್ಗದರ್ಶನದಲ್ಲಿ ಕ್ಷೇತ್ರಾಭಿವೃದ್ಧಿ, ಮತ್ತೆ ಇತರ ಕೆಲಸ ಕಾರ್ಯಗಳು ಆಯ್ತು ಆ ಸಮಯದಲ್ಲಿ. ಈ ರಾಮಜ್ಜ ಗುರುಗಳಾಗಿ ಎಲ್ಲಿಯೂ ತಮ್ಮ ಅಧಿಕಾರ ಚಲಾಯಿಸ್ಲಿಕ್ಕೆ ಹೋಗ್ಲಿಲ್ಲ, ಹಾಗಾಗಿ ಆ ಯುವ ನೇತಾರ ಬಾರೀ ಬೇಗ ’ಧೀಮಂತ’ ನೇತಾರ ಆದ್ರು, ಗುರುಗಳು ಮನೆಯಲ್ಲೇ ಉಳಿದ್ರು! ಮುಂದೆ ಆ ಯುವ ಬೆಳ್ದು ಬೆಳ್ದು, ಸಡನ್ನಾಗಿ ಮಂಗ್ಳೂರಿನ ಯಂಪಿ ಆದ್ರು, ಏನೋ ಒಂದು ಚಾನ್ಸ್ ನಲ್ಲಿ, ಆರ್.ಯಸ್.ಯಸ್ ಹಿಂದು ಅಲೆ ಇತ್ತು, ಆದ ಕಾರಣ ಯುವ ಗೆದ್ರು ಅಂತ ಎಲ್ರೂ ಹೇಳಿದ್ರು ಆ ಟೈಮಿನಲ್ಲಿ. ಯಂಪಿ ಆದ ಟೈಮಿನಲ್ಲಿ ಕೂಡಾ ಯುವನಿಗೆ ’ರಾಜಕೀಯ ಗುರು’ ರಾಮಜ್ಜನ ಆಶೀರ್ವಾದ ತೆಕ್ಕೊಳ್ಳಿಕ್ಕೆ ಮರೀಲಿಲ್ಲ ಮಾತ್ರ.
ಈಗ ನೋಡಿ ಕತೆಯ ಟರ್ನ್:
ವಿಧಾನಸಭೆ ಓಟಿಗೆ ನಮ್ಮ ಪುತ್ತೂರಿನಿಂದ ಶಕು ಅಕ್ಕ ನಿಂತಿದ್ರು, ಡೀವಿ ಮಂಗ್ಳೂರಿಗೆ ಹೋದ್ರಲ್ಲ, ಹಾಗೆ. ಗೆಲ್ಲೂದು ಡೌಟು ಅಂತ ಹೇಳ್ತಾ ಇದ್ರು, ಆದ್ರೆ ಈ ಮಹಿಳಾ ಸಂಘ ಇತ್ಯಾದಿಗಳ ’ಗ್ರೌಂಡ್-ವರ್ಕ್’ ನಿಂದಾಗಿ ಅಮೋಘ ಅಂತರದಲ್ಲಿ ಗೆದ್ದುಬಿಟ್ರು. ಅವ್ರ ಗ್ರಾಚಾರಕ್ಕೆ ನಮ್ಮ ವಿದಾನಸಭೆ ಕೂಡಾ ಅತಂತ್ರ ಆಯ್ತು. ಇದ್ರ ಎಡೆಯಲ್ಲಿ, ಯಾವಗ ಅಂತ ಗೊತ್ತಿಲ್ಲ, ನಮ್ಮ ಡೀವಿಯ ಹೆಸ್ರು ಡಿ.ವಿ.ಸದಾನಂದ ಇರೂದು ಡಿ.ವಿ.ಸದಾನಂದ ಗೌಡ ಆಯ್ತು. ರಾಜ್ಯ ರಾಜಕೀಯಕ್ಕೆ ಲಗ್ಗೆ ಇಟ್ಟ ಅವರು ಗೌಡಾಧಿಪತ್ಯದ ಜೆ.ಡಿ.ಯಸ್ ನ ಎದುರು ಜಾತಿಲೆಕ್ಕಾಚಾರದಲ್ಲಿ ಬಡೀಲೆಕ್ಕೆ ನಿತ್ರು. ಕರ್ನಾಟಕ ಬಿ.ಜೆ.ಪಿ ಯ ರಾಜಾಧ್ಯಕ್ಷರಾದ್ರು, ಯೆಡಿಯೂರಪ್ಪನಿಗೆ ಬಯಂಕರ ಹತ್ತಿರ ಆದ್ರು. ಅದರಿಂದಾಗಿ ಶೋಬಕ್ಕನಿಗೂ!
ಯಾರು ಈ ಶೋಬಕ್ಕ? ನಮ್ಮ ಶಕುಅಕ್ಕನ ಊರು ಉಂಟಲ್ವಾ, ಕಡಬ - ಅಲ್ಲಿ ಹತ್ರ ಕರಂದ್ಲಾಜೆ ಅಂತ ಉಂಟಂತೆ, ಅಲ್ಲಿಂದ ಬಂದ ಹುಡುಗಿ. ಈ ಜನ ಪುತ್ತೂರಿನವರಿಗೇ ಸರಿಯಾಗಿ ಗುರ್ತ ಇಲ್ಲ ಅವಳನ್ನು, ಮತ್ತೆ ಉಳಿದವರಿಗೆ ಎಷ್ಟು ಇರ್ಬೌದು? ಕಳೆದ ಸರ್ಕಾರ ಇರುವಾಗ್ಳೇ ಅವಳ ಹೆಸ್ರು ಅಲ್ಲಲ್ಲಿ ಕೇಳ್ತಾ ಇತ್ತು, ಈಗ ಓಟಿನ ಟೈಮಿನಲ್ಲಿ ಮತ್ತೂ ಜಾಸ್ತಿ... ಅವ್ಳಿಗೆ ಟಿಕೇಟ್ ಕೊಟ್ರಂತೆ, ಬೆಂಗ್ಳೂರಿನ ಯಶವಂತಪುರದಲ್ಲಿ. ಕೊಡ್ಳಿ ಅಪ್ಪ, ಯಾರಿಗೆಂತ? ಆದ್ರೆ ಕಳಿದ ಸರ್ತಿ ಪುತ್ತೂರಿನಲ್ಲಿ ಆಶ್ಚರ್ಯಕರ ಮಾರ್ಜಿನ್ನಿನಲ್ಲಿ ಗೆದ್ದ ಶಕು ಅಕ್ಕನಿಗೆ ಎಂತಕೆ ಟಿಕೇಟಿಲ್ಲ? ಅದೂ ನಮ್ಮ ರಾಜ್ಯಾಧ್ಯಕ್ಷರ ಊರಿನಲ್ಲಿ? ಶಕು ಮಾಡಿದ ತಪ್ಪಾದರೂ ಎಂತದ್ದು? ಅದು ನಮ್ಮ ರಾಮಜ್ಜನ ಪ್ರಶ್ನೆ.
ಇಷ್ಟೆಲ್ಲ ಆಗುವ ಹೊತ್ತಿಗೆ ಕೇಳುವ ಇನ್ನೊಂದು ಹೆಸರು ನಮ್ಮ ಆರೆಸ್ಸೆಸ್ ಭಟ್ರದ್ದು. ಕಲ್ಲಡ್ಕದ ಪ್ರಭಾಕರ ಭಟ್ರು ಚರಿತ್ರೆಯಲ್ಲಿ ಸುಮಾರು ಹೆಸರು ಮಾಡಿದ ಪೈಕಿ. ನಮ್ಮ ದ.ಕ ದ ಬಿ.ಜೆ.ಪಿ ಮತ್ತು ಆರೆಸ್ಸೆಸ್ ನ ಸಂಬಂಧದ ದೊಡ್ಡ ಕೊಂಡಿ ಅವರು. ನಮ್ಮೂರಿನ ಎಲ್ಲ ಬಿಜೆಪಿ ಶಾಸಕ ಟಿಕೇಟುಗಳೂ ಅವರು ಹೇಳಿದವ್ರಿಗೆ ಮಾತ್ರ ಕೊಡ್ತಾರಂತೆ. ಅವ್ರು ಈ ಸಲದ ಟಿಕೇಟು ಶಕುಅಕ್ಕನ ಬದಲು ನಮ್ಮ ಪ್ರಸಾದ್ ಬಂಡಾರಿ ಡಾಕ್ಟ್ರ ಬುಡೆತಿಗೆ ಕೊಡಿಸಿದ್ದಾರೇಂತ. ತಾವು ಕಟ್ಟಿದ ತತ್ವ, ನಿಷ್ಠೆ ಇತ್ಯಾದಿ ರಾಜಕಾರಣ ತನ್ನ ಕಣ್ಣಿನ ಎದುರಿಗೇ ಸಾಯ್ತಾ ಇರೂದು ಕಂಡು ನಮ್ಮ ರಾಮಜ್ಜನಿಗೆ ಪಿಸುರುಬಂದು ಕೇಳಿಯೇ ಬಿಟ್ರು.
ಆಗ ನೋಡಿ ಹೊತ್ತಿಕೊಂಡದ್ದು.. ಡೀವಿ ಕಟ್ಟಿಸಿದ ಎಲ್ಲಾ ಪೆಟ್ರೋಲು ಬಂಕುಗಳಿಗೂ ಒಂದೇ ಸಲಕ್ಕೆ ಕಿಚ್ಚು ಬಿದ್ದ ಹಾಗೆ ಆಯ್ತು ಆಗ ಪುತ್ತೂರು ಬಿಜೆಪಿಯಲ್ಲಿ. ಕೇಳುವವರೇ ಇಲ್ಲ ನನ್ನನ್ನು ಅಂತ ಗ್ರೇಶಿಕೊಂಡಿದ್ದ ಧೀಮಂತ ನಾಯಕನಿಗೆ ಸ್ವಲ್ಪ ಬಿಸಿ ಮುಟ್ಟಿದ್ದು ಆಗ್ಲೇ. ಈ ರಾಮಜ್ಜ ಧೂಳಿನಿಂದ ಬರುವ ತಾಕತ್ತಿನವ್ರು, ಅವ್ರನ್ನು ಎದುರು ಹಾಕಿದ್ರೆ ಪುತ್ತೂರಿನಲ್ಲಿ ಕಷ್ಟ ಅಂತ ಧೀಮಂತ ನಾಯಕನಿಗೆ ಗೊತ್ತಾಗಿ ಹೋಯ್ತು, ಬಿಜೆಪಿಯ ಹಳೆ ತಲೆಗಳನ್ನು - ಅಂದ್ರೆ ರಾಮಜ್ಜನ ಪ್ರಾಕಿನ ಜೊತೆಗಾರರನ್ನು ಸಂಧಾನಕ್ಕೆ ಹೋಗ್ಲಿಕ್ಕೆ ವ್ಯವಸ್ಥೆ ಮಾಡಿದ್ರು, ರಾಮಾ ಜೋಯಿಸ್ ಅವ್ರು - ಇವ್ರು ಎಲ್ಲ ಬಂದ್ರು, ಈ ಹಠವಾದಿಯದ್ದು ಒಂದೇ - ಹಾಲಿ ಶಾಸಕಿಯನ್ನು ಕಣಕ್ಕಿಳಿಸ್ಲಿಕ್ಕೆ ತೊಂದರೆ ಎಂತದ್ದೂಂತ... ಇವ್ರಲ್ಲಿ ಉತ್ತರ ಇಲ್ಲ. ಪಾಪ. ತಿರುಗಿ ಮನೆಗೆ ಹೋದ್ರು.
ನಿಮಿಗೆ ಗೊತ್ತುಂಟಾ? ತೊಂದರೆ ಎಂತದ್ದು? ಉಮ್ಮಪ್ಪ. . .!
ಕೆಲವು ಬೆಚ್ಚ ಬೆಚ್ಚ ಪೋಯಿಂಟ್ ಹೇಳ್ತೇನೆ:
ಬಿ.ಜೆ.ಪಿ ದೃಷ್ಟಿಯಿಂದ:
- ಬಿಜೆಪಿ ಸಂಸ್ಕೃತಿಯಲ್ಲಿ ಪಾರ್ಟಿ ಮುಖ್ಯ, ವ್ಯಕ್ತಿ ಅಲ್ಲ - ಯಾರು ನಿತ್ರೂ, ಯಾರು ಗೆದ್ರೂ ಆ ಪಕ್ಷದ ಶಿಸ್ತಿನಲ್ಲಿ ಇದ್ರೆ ಆಯ್ತು.
- ಈ ಕಳ್ದ ೩ ವರ್ಷದಲ್ಲಿ ಶಕು ಅಕ್ಕ ಶಾಸಕಿ ಆಗಿ ಎಲ್ಲ ಕೆಲಸ ಮಾಡಿದ್ದಾರೆ, ಆದ್ರೆ ಪಾರ್ಟಿ ಕಟ್ಟುವ ಯಾವ ಕೆಲಸ ಕೂಡಾ ಮಾಡ್ಳಿಲ್ಲ.
- ಶಕುಂತಲಾ ಶೆಟ್ಟಿ ಓಟಿಗೆ ನಿಲ್ಲುವಾಗ ಅವ್ರ ಬಗ್ಗೆ ಎಷ್ಟು ಗೊತ್ತಿತ್ತು ಜನ್ರಿಗೆ, ಹಾಗಿರುವಾಗ ಈ ಸಲ ಇನ್ನೊಬ್ಬ ಹೊಸಬ್ರಿಗೆ ಎಂತಕೆ ಕೊಡ್ಬಾರ್ದು?
- ಮಂತ್ರಿಗಿರಿ ಎಂತದ್ದೋ ಕೊಡ್ಳಿಕ್ಕೆ ಆಗ್ಲಿಲ್ಲ, ಆದ್ರೆ ಗೇರು ನಿಗಮ ಅಧ್ಯಕ್ಷಗಿರಿ ಕೊಡುವಾಗ ಬೇಡಾಂತ ಹೇಳಿದ್ದು ಎಂತಕೆ?
- ಈ ಶಾಸಕರು, ರಾಜಕಾರಣಿಗಳು ೫ ವರ್ಷ ಬರ್ತಾರೆ, ಹೋಗ್ತಾರೆ, ಅವ್ರ ವಿಷನ್ ೫ ವರ್ಷಕ್ಕಿಂತ ಮುಂದೆ ಹೋಗೂದಿಲ್ಲ, ತುಂಬ ದೂರದೃಷ್ಟಿ ಇರುವ, ಸಮಾಜದ ಕಾಳಜಿ ಇರುವ ಆರೆಸ್ಸೆಸ್ಸಿನಂತ ಸಂಘಟನೆಗಳು ನಮ್ಮ ನಾಯಕರನ್ನು ಆಯ್ಕೆಮಾಡೂದ್ರಲ್ಲಿ ಎಂತದ್ದೂ ತಪ್ಪಿಲ್ಲ.
ಶಕು ಅಕ್ಕನ ದೃಷ್ಟಿಯಿಂದ:
- ಶಾಸಕಿಯಾಗಿ ಎಲ್ಲ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದಾರೆ, ಮತ್ತೆ ನಮ್ಮ ಸರ್ಕಾರದ ಕೆಲಸದಲ್ಲಿ ಇರುವಾಗ ಪಾರ್ಟಿಕೆಲಸ ಅಂತ ತಿರುಗ್ಲಿಕ್ಕೆ ಆಗ್ತದಾ?
- ಒಂದು ಸಲ ಗೆದ್ರೂ ಪೂರ್ತಿ ೫ ವರ್ಷ ಸಿಕ್ಕ್ಲಿಲ್ಲ, ಮತ್ತೆ ಎಲ್ರಿಗೂ ಎರಡೆರಡು ಅವಕಾಶ ಕೊಟ್ಟಿದ್ದಾರೆ, ಇವ್ರಿಗೆ ಮಾತ್ರ ಎಂತಕೆ ಇಲ್ಲ?
- ಪಾರ್ಟಿಯ ಆಂತರಿಕ ವಿಷಯಕ್ಕೆ ಆರೆಸ್ಸೆಸ್ಸಿನವ್ರು ಎಂತಕೆ ತಲೆ ಹಾಕೂದು?
- ಪ್ರಸಾದ್ ಭಂಡಾರಿಯನ್ನು ಆದ್ರೆ ಎಲ್ಲೊರಿಗೂ ಗೊತ್ತುಂಟು, ಅವ್ರ ಹೆಂಡತ್ತಿಯನ್ನು ಯಾರಿಗೆ ಗೊತ್ತುಂಟೂಂತ ನಿಲ್ಲಿಸೂದು?
- ಎಂತದ್ದೂ ತಪ್ಪು ಮಾಡ್ಲಿಲ್ಲ. ಟಿಕೇಟು ಕೊಡ್ಲಿಲ್ಲ ಎಂತಕೆ?
ಕೆಲಾವು ಜನರ ಸ್ವಗತಗಳು:
- ಬೀಜೇಪಿಯ ಹೆಗ್ಗಣಗಳಿಗೆ ನುಂಗ್ಲಿಕ್ಕೆ ಬಿಡ್ಳಿಲ್ಲ ಈ ಶಕುಅಕ್ಕ, ಅದಿಕ್ಕೆ ಟಿಕೇಟು ಕೊಡ್ಳಿಲ್ಲ.
- ಡೀವಿಗೇ ಮಂತ್ರಿ ಆಗ್ಲಿಕ್ಕೆ ಚಾನ್ಸು ಸಿಕ್ಲಿಲ್ಲ, ಇನ್ನು ಈ ಸಲ ಶಕು ಅಕ್ಕ ನಿತ್ರೆ, ಅವ್ರು ಗೆದ್ದು ವಿದಾನಸೌದಕ್ಕೆ ಹೋದ್ರೆ ಅವ್ರಿಗೆ ಮಂತ್ರಿಗಿರಿ ಕೊಡ್ಬೇಡ್ವಾ? ಆಗ ಧೀಮಂತ ನಾಯಕರು ಚಪ್ಪೆ ಆಗ್ಲಿಲ್ವ?
- ಮ್, ಇನ್ನೊಂದು ಸ್ವಲ್ಪ ಗುಟ್ಟು - ಡೀವಿಯ ಸೇವೆ ಏನಿದ್ರೂ ಅದು ಕರ್ನಾಟಕ ಬಿಜೆಪಿ ಅಧ್ಯಕ್ಷಗಿರಿಯ ಒಳಗೇ ಇರ್ಬೇಕಲ್ವ? ಈ ಶೋಬಕ್ಕನಿಗೆ ಮಂತ್ರಿ ಸೀಟಿನಲ್ಲಿ ಕೂರ್ಬೇಕೂಂತ ಬಯಂಕರ ಆಸೆ, ಪಾಪ ಬೇರೆ ದಾರಿ ಉಂಟ, ಮತ್ತೆ ಬರ್ಬೌದಾದ ಆ ತೊಂದ್ರೆಯನ್ನು ಈಗ್ಲೇ ನಿವಾರಿಸುವ ದೂರಾಲೋಚನೆ ನಮ್ಮ ಯಡಿಯೂರಪ್ಪನಿಗೆ - ಶಕುಅಕ್ಕ ಇದ್ದಾರಲ್ಲ, ಬಲಿ ಕೊಡುವ ಅಂತ ಆಯಿತು. ಅವ್ರಿಗೆ ಬೇಜಾರು ಕೂಡಾ ಆಗ್ಬಾರ್ದು ತನಿಗೆ ಸೀಟಿಗೆ ಕೂಡಾ ತೊಂದ್ರೆ ಆಗ್ಬಾರ್ದು, ಎಂತ ಮಾಡುದು - ಸುಮ್ನೆ ಕೂತ್ರು ಧೀಮಂತ ನಾಯಕ ಡೀವಿ..
- ಮುತ್ತಪ್ಪಣ್ಣನ ಫೋನ್ ಬರ್ತಾ ಉಂಟಂತೆ ,ಶಕುಅಕ್ಕನಿಗೆ ಓಟು ಹಾಕ್ಲಿಕ್ಕೆ ಹೇಳಿಕೊಂಡು.
ಏನೇ ಆದ್ರೂ, ರಾಮಜ್ಜ ಅವರ ಜೀವಮಾನದ ಮೊದಲ ಬಾರಿಗೆ ಬಿಜೆಪಿ ಬಿಟ್ಟು ಬೇರೆ ಕ್ಯಾಂಡಿಡೇಟಿಗೆ ಓಟು ಹಾಕ್ತಾ ಇದ್ದಾರೆ.
ಶೋಬಕ್ಕನ ಆಸೆಯ ಎದುರು ರಾಮಜ್ಜನ ಅವತ್ತಿನ ಬೆವರಿನ ಶಕ್ತಿ ನೆಲಕ್ಕೆ ಇಳ್ದು ಹೋಯ್ತು, ಅಲ್ವಾ? ಛೆಕ್...