Monday, March 9

ಮುತಾಲಿಕ್ ಮತ್ತೆ ರೇಣುಕಾ : ಉಗ್ರತ್ವದ ೨ ಮುಸುಡುಗಳು

ನಿಮಿಗೆ ಮೊನ್ನೆ ಆದ ಸಂಗತಿ ಗೊತ್ತುಂಟಲ್ಲ, ಮುತಾಲಿಕಿನ ಜೆನಗಳು ಪಬ್ಬಿಗೆ ದಾಳಿ ಮಾಡಿದ್ರು -ಅಂತ.
ಗೊತ್ತಾಗದೆ ಇರ್ಲಿಕ್ಕೆ ಸಾಧ್ಯವೇ ಇಲ್ಲ ನೋಡಿ, ಟೀವಿಯವ್ರು ಎಲ್ಲೊರು ಎಂತದ್ದೋ ಆಯ್ತು ಅಂತ ಬೊಬ್ಬೆ ಹೊಡೀಲಿಕ್ಕೆ ಸುರು ಮಾಡಿದ್ರು. ಎಂತ ಅವಸ್ಥೆ ಮಾರ್ರೆ, ಆ ಹೆಂಗಸು - ರೇಣುಕ ಇದ್ದಾಳಲ್ಲ, ಅವ್ಳಿಗೆ ಸಾ ಮರ್ಯಾದಿ ಇಲ್ಲ. ಪಿಂಕು ಪಿಂಕು ಅಂತ ಬೊಬ್ಬೆ ಹೊಡೀತಾ ಉಂಟು. ನನಿಗೆ ಅಂತೂ ಟೀವಿ ನೋಡ್ಳಿಕ್ಕೆ ಮನಸ್ಸು ಬರೂದಿಲ್ಲ.
ನಮ್ಮ ಊರಿನಲ್ಲಿ ಕೆಲಸಕ್ಕೆ ಹೋಗುವ ಮೋನಪ್ಪಣ್ಣನವ್ರ ಹತ್ರ ಕೇಳಿದ್ರೆ ಹೇಳ್ತಾರೆ. ಕುಡಿಯೂದು ಎಂತಕೆ? ಬೆಳಿಗ್ಗೆಯಿಂದ ಬೇಲೆ ಮಾಡಿ ಬಚ್ಚಿದ್ರೆ, ಸ್ವಲ್ಪ ಬಚ್ಚಲು ಕಡಿಮೆ ಆಗ್ಲಿಕ್ಕೇಂತ- ತೊಟ್ಟೆ ಗಂಗಾಸರವೋ, ಅಲ್ಲ ಗೋಂಕೆದ ಗಂಗಾಸರವೋ ಮಿನಿ ಕುಡೀತಾರೆ. ಅದು ಬಿಟ್ಟು, ಈಗದ ಮಕ್ಕಳ ಹಾಗೆ ಇಡೀ ದಿನ ಕೂತ್ಕೊಂಡು ಕುಡಿಯುದಿಲ್ಲ. ಇಡೀ ದಿನ ಕುಡಿಯುದು ಒಂದೇ ಉದ್ಯೋಗ ಅಂತ ಮಾಡ್ಳಿಕ್ಕೆ ಹೊರಟ್ರೆ, ಆದೀತೋ? ಮೋನಪ್ಪಣ್ಣ ಕುಡಿಯೂದಿಲ್ಲ ಅಂತ ಅಲ್ಲ, ಸಮಾ ಕುಡೀತಾರೆ. ಆದ್ರೆ - ಸ್ವಲ್ಪ ಹೊತ್ತು, ಗೊತ್ತು ಎಲ್ಲ ಉಂಟು. ಸಂಜೆ ಕೆಲಸ ಬಿಟ್ಟು ಬರುವಾಗ ಗಡಂಗಿಗೆ ಹೋಗಿ, ಉಪ್ಪಡ್ ನೊಟ್ಟಿಗೆ ಒಂದು ೩ ತೊಟ್ಟೆ ಮುಗಿಸ್ತಾರೆ. ಬರುವಾಗ ೧ ತೊಟ್ಟೆ ಪ್ರೀತಿಯ ಹೆಂಡ್ತಿ ಉಮ್ಮಕ್ಕನಿಗೆಸ ತರ್ತಾರೆ. :-) ಅದು ಸಮಾಜ ನಡ್ಕೊಂಡು ಬಂದ ರೀತಿ. ಅವ್ರ ಮನೆಯಲ್ಲಿ ಅಜ್ಜಿ ಸ ಹಾಗೇ ಕುಡೀತಾ ಇದ್ದದ್ದಂತೆ. ಕ್ರಮದಲ್ಲಿ.
ಶಾಲೆಗೆ ಹೋಗುವ ಹುಡುಗರು, ಶಾಲೆಗೆ ಹೋಗದ ಹುಡುಗರು ಎಲ್ಲ ಮೆಲ್ಲ ಅಪ್ಪನಿಗೆ ಕಾಣದ ಹಾಗೆ ಹಾಕ್ಲಿಕ್ಕೆ ಸುರು ಮಾಡ್ತಾರೆ. ಮಾಡಿ ಮಾಡಿ ಮಿತಿ ತಪ್ತಾರೆ. ತಂದೆಗೆ ಇದ್ದ ಕ್ರಮ ಮಗನಿಗೆ ಬರೂದಿಲ್ಲ, ಎಂತಕೇಳಿದ್ರೆ - ತಂದೆಗೆ ಹಗಲಿಡೀ ಕೆಲಸ ಇರ್ತದೆ, ಮೈ ಬಗ್ಗಿಸ್ಲಿಕ್ಕೆ. ಸಂಜೆ ಸ್ವಲ್ಪ ಹೊತ್ತು ಉಳ್ದಿರ್ತದೆ, ಕುಡೀಲಿಕ್ಕೆ - ಮತ್ತೆ ಕುಡ್ದದ್ದನು ಇಳಿಸ್ಲಿಕ್ಕೆ. ಮಗನಿಗೆ ಹಾಗಲ್ಲ. ಇಡೀ ದಿನ ಪುರುಸೊತ್ತೇ. ಮಗ ಮಲ್ಲಾಯೆ, ಬಿಡಿ. ಅಂತೂ ಒಂದು ದಿನ ಅಪ್ಪನ ಎದುರೇ ಕುಡಿಯುವ ಧೈರ್ಯ ಬರ್ತದೆ. ನನ್ನ ಮಗ ಸಣ್ಣ ಪ್ರಾಯದಲ್ಲೇ ಕುಡೀಲಿಕ್ಕೆ ಸುರು ಮಾಡಿದ ಅಂತ ಒಂದು ಬೇಜಾರು ಅಪ್ಪನಿಗೆ ಇದ್ದೇ ಇರ್ತದೆ. ಅಂತಾದ್ರಲ್ಲಿ ಮಗಳು ಕುಡೀಲಿಕ್ಕೆ ಸುರು ಮಾಡಿದ್ರೆ ಎಂತ ಕಥೆ? ತಡೀಲಿಕ್ಕೇ ಸಾದ್ಯ ಇಲ್ಲ.
ಗೋಂದೊಳು ಪೂಜೆಯ ಹಾಗೆ ಎಂತಾದ್ರು ಇದ್ರೆ ಸ್ವಲ್ಪ ಸ್ವಲ್ಪ ತೀರ್ಥ ತೆಕ್ಕೊಳ್ತಾರೆ, ಬೇರೆ ಎಂತ ಸ ಇಲ್ಲ. ಮನೆಯಲ್ಲೇ ಕುಡಿಯೂದು ಬಿಟ್ಟು ಒಂದು ಹಂತ ಮುಂದೆ ಹೋಗಿ ಗಡಂಗಿಗೆ ಹೋದರೆ ಎಂತ ಕಥೆ? ಮೋನಪ್ಪಣ್ಣನವರ ಹಾಗೆ ಸಾವಿರಾರು ಜನಗಳಿಗೆ ತಡ್ಕೊಳ್ಳಿಕೇ ಆಗೂದಿಲ್ಲ. ಯಾವ ರೀತಿ ಮೋನಪ್ಪಣ್ಣನಿಗೆ ಅವನ ಅಪ್ಪನಿಂದ ಈ ಮನಸ್ಥಿತಿ ಬಂತೋ,ಅದೇ ಮೋನಪ್ಪಣ್ಣನ ಮನಸ್ಥಿತಿ ಅವನ ಮಗನಿಗೂ ಬಂದಿರ್ತದೆ.

ಸಣ್ಣ ಪ್ರಾಯದಲ್ಲಿ ಸಂಘಕ್ಕೆ ಸೇರ್ತಾರೆ ಕೆಲವು ಜನ. ಸಂಘ ಅಂದ್ರೆ ಆರೆಸ್ಸೆಸ್. ಯೋಗ, ನಮಸ್ಕಾರ, ಬೌದ್ಧಿಕ್ - ಹೀಗೆ ಸುಮಾರು ದೇಹ-ಮನಸ್ಸು ಎರಡೂ ಗಟ್ಟಿ ಆಗುವ ಕ್ರಮಗಳು ಇರ್ತದೆ. ಇದ್ರಲ್ಲಿ ಬೆಳ್ದು ಬಂದ ಕೆಲವ್ರಿಗೆ ಇದು ಬರೀ ಚಪ್ಪೆ, ಇನ್ನೂ ಕಡ್ಪದ್ದು ಬೇಕು -ಅಂತ ಆಗ್ಲಿಕ್ಕೆ ಸುರು ಆಗ್ತದೆ. ವಿಶ್ವ ಹಿಂದೂ ಪರಿಶತ್ತು, ಅದು ಚಪ್ಪೆ ಅಂತ ಸುರು ಆದ ಮತ್ತೆ ಭಜ್ರಂಗದಲೊ, ಹೀಗೆ - ಕಡ್ಪತನದ ಹುಡುಕಾಟ ನಿರಂತರ. ಹೀಗೇ ಮೋನಪ್ಪಣ್ಣನ ಮಕ್ಕಳ ಹಾಗೆ ಇರುವ ನೂರಾರು ಅತೃಪ್ತ ಜೆನಗಳು ಒಂದು ಸೇನೆ ಕಟ್ಟಿದ್ರು - ಅದೇ ಶ್ರೀರಾಮ ಸೇನೆ. ಒಳ್ಳೆ ಉದ್ದೇಶ ಇಲ್ಲ ಅಂತ ಹೇಳೂದಿಲ್ಲ ನಾನು. ಆದ್ರೆ ಕಡ್ಪ ಜಾಸ್ತಿ ಆಗಿ ಅದು ಗೌಣ ಆಗಿ ಕಾಣ್ತದೆ.
ಸಣ್ಣ ಇರುವಾಗ ಕಾನ್ವೆಂಟು, ಮತ್ತೆ ಪ್ರೈವೇಟು ಶಾಲೆ, ಮತ್ತೆ ಹೈ-ಪೈ ಕೋಲೇಜು, ಮತ್ತೆ ಒಂದು ಒಳ್ಳೆ ಕೆಲಸ. ಒಂದು ಚೆಂದದ ಬೈಕ್ಕಿನ ಹಿಂದಿನ ಸೀಟು - ಹೀಗೆ ಬೆಳೀತಾರೆ ಕೆಲವು ಹುಡುಗಿಯರು. ಅಂತದ್ರಾಲ್ಲಿ ಒಂದು ರೇಣುಕಾ ಚೌದ್ರಿ ಕೂಡಾ ಒಂದು. ಆ ನಮುನೆಯ ಜೀವನಕ್ಕೆ ಅವ್ರು ಕೊಟ್ಟ ಹೆಸ್ರು ಸ್ವಾತಂತ್ರ್ಯ ಅಂತ. ’ಮಹಿಳಾ ವಾದ’ ಅಂತಲೂ ಹೆಸ್ರು ಉಂಟು. ಪುರುಶ ಸಮಾಜದ ಎದುರು ಚಳುವಳಿ ಅವ್ರ ಮುಖ್ಯ ಉದ್ದೇಶ. ಹಿಂದೂ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ನಡೆದು ಬಂದ ಮಹಿಳಾ ದೌರ್ಜನ್ಯದ ಬಗ್ಗೆ ಅವರ ಸಿದ್ಧ ಭಾಷಣ. ಭಾಷೆ- ಜಾಗ- ಮೈಕ್ಕ - ಸಭೆ ಬೇರೆ ಆದ್ರೂ, ಮಾತಾಡುವ ವಿಶಯ ಒಂದೇ: ಮಹಿಳೆ. ಸಮಾಜದಲ್ಲಿ ಮಹಿಳೆಗೆ ಆಗ್ತಾ ಇರುವ ಅನ್ಯಾಯದ ವಿರುದ್ಧ ಬಂಡಾಯಕ್ಕೆ ಜನರನ್ನು ತಯಾರು ಮಾಡೂದು. ಎಲ್ಲಾ ಪುರುಶರೂ ಮಾಡೂದು ಅವರ ಮನೆಯ ಮಹಿಳೆಗಾಗಿ ಅಂತ ಎಷ್ಟು ಹೇಳಿದ್ರೂ ಇವ್ರಿಗೆ ಅರ್ಥ ಆಗುದಿಲ್ಲ.
ಮಜಾ ಮಾಡಿ ಅರ್ದ ಡ್ರೆಸ್ಸಿಲ್ಲಿ ಕುಣಿದು ನಮ್ಮತನ ಹಾಳು ಮಾಡುದು ಶ್ರೀ ರಾಮ ಸೇನೆಗಂತೂ ಸರಿ ಕಾಣ್ಲಿಲ್ಲ. ರೇಣುಕನ ’ಸ್ವಾತಂತ್ರ’ ಮುತಾಲಿಕಿಗೆ ಸ್ವೇಚ್ಚಾಚಾರ ಆಗಿ ಕಂಡಿತು. ಉಮಿಲ್ ಬಡ್ದುಕೊಂಡು ಕೂತಿದ್ದ ಟೀವಿಯವ್ರಿಗೆ ಹೇಳಿ ಸೀದ ವೇನಿನಲ್ಲಿ ಹೋಗಿ ಬೊಬ್ಬೆ ಹೊಡುದ್ರು. ಟೀವಿ-೯ ಅಂತೂ ಕನಿಷ್ಠ ೧ ಲಕ್ಷ ಸರ್ತಿ ಆ ಪಬ್ಬಿನಲ್ಲಿದ್ದ ಹುಡುಗಿಯ ಅರ್ಧ ಅಂಗಿ ತೋರಿಸಿ, ಸೇನೆ ಮಾಡಿದ ಮಹಿಳೆಯ ಮೇಲಿನ ಅಗೌರವದ ಬಗ್ಗೆ ಬೊಬ್ಬೆ ಹಾಕಿತ್ತು, ಪಾಪ. ಉಳ್ದದ್ದೂ ಸ ಎಂತ ಕಮ್ಮಿ ಇಲ್ಲ ಮಾರ್ರೆ. ಈಗ ಬಂದದ್ದು ರೇಣುಕನ ಎಂಟ್ರಿ. ಸುಮಾರು ಸಮಯ ಮನೆಯಲ್ಲಿ ಕೂತು, ತಂದ ಲಿಪ್ಸ್ಟಿಕ್ಕು, ಪೌಡರು ಎಲ್ಲ ಪುಸ್ಕ ಆಗಿಕೋಂಡು ಇತ್ತು. ಇದೇ ಒಳ್ಳೆ ಸಮಯ, ಎಲ್ಲ ಪೇಪರಿನಲ್ಲಿ ಸ ಬರ್ಬೌದು ಅಂತ ರಪಕ್ಕ ಹೊರಟ್ಳು, ಗಂಡನಿಗೆ ಸ ಹೇಳದೆ.
ವೇಲೆಂಟೈನ್ಸ್ ಡೆ ಹತ್ರ ಬಂತಲ್ಲ, ಯಾರೆಲ್ಲ ಕೆಂಪು ಬಣ್ಣದ್ದು ಹಾಕ್ತಾರೋ, ಅವ್ರೆಲ್ಲ ಮುತಾಲಿಕ್ಕಿಗೆ ಕಳಿಸಿ ಅಂತ ಕರೆ ಕೊಟ್ಳು.ಚಿ, ಹೇಸಿಗೆ. ಮುತಾಲಿಕ್ ಅದಿಕ್ಕೆ - ಚ* ಕಳಿಸಿದವರಿಗೆ ಸೀರೆ ಅಂತ ಹೇಳಿದ್ರೋ, 'ರೇಣುಕ ಮಾಡಿದ್ದು ತಪ್ಪು, ಮುತಾಲಿಕ್ ಮಾಡಿದ್ದು ಸರಿ' ಅಂತ ಮಂಗ್ಳೂರಿನ ಹೆಚ್ಚಿನವ್ರಿಗೆ ಕಾಣ್ಳಿಕ್ಕೆ ಸುರು ಆಯ್ತು. ಅಂಗೈ ಅಗಲ ಇದ್ದ ವ್ಯಕ್ತಿತ್ವ ವ್ಯತ್ಯಾಸ, ಈಗ ಅಜಗಜಾಂತರ.

ನನಿಗೆ ಕಾಣುದು: ಇಬ್ರೂ ಉಗ್ರತ್ವದ ಎರಡು ಮುಸುಡುಗಳು ಅಂತ. ಅಲ್ವಾ?

Saturday, December 20

ಬರಹಗಾರರ ಬದುಕು 'ಚೈತ್ರರಶ್ಮಿ'

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಕಾಲಿನುದ್ದದ ಹಾಸಿಗೆಯಲ್ಲಿ ಕಾಲುಚಾಚಿಕೊಂಡು ಮಲಗ್ಲಿಕ್ಕೆ ಸಾಕಾಗುವ ನೆಮ್ಮದಿಯ ಕೆಲಸ . ಎಲ್ಲರ ಹಾಗೆ ಕ್ಲಬ್ , ಔಟಿಂಗ್ ಅಂತ ತಿರುಗಬಹುದಾದ ಎಳೆ ಪ್ರಾಯ. ಚಿಗುರು ಮೀಸೆ ಬಂದಿರುವ ಸ್ಮಾರ್ಟ್ ವ್ಯಕ್ತಿತ್ವ. ಎಲ್ಲ ಉಂಟು, ಆದ್ರೆ ಬರೀಬೇಕು ಅಂತ ಒಂದು ಛಲ ಸ ಉಂಟು!!

ನಾನು ಹೇಳಿಕೊಂಡು ಇರೂದು ನನ್ನ ಬಗ್ಗೆ ಅಲ್ಲ ಆಯ್ತ ಮಾರ್ರೆ. ನಮ್ಮ ರಾಚಂ ನ ಬಗ್ಗೆ. ರಾಚಂ ನನ್ನದೇ ಪ್ರಾಯ. ನನಿಗಿಂತ ಮೊದಲೇ ಬೆಂಗಳೂರಿಗೆ ಬಂದಿದ್ದಾರೆ. ದೂರದ ಹಳ್ಳಿ ಊರಿನಲ್ಲಿ ಇರುವಾಗಲೇ ಬರೀತಾ ಇದ್ರಂತೆ, ನಾವೆಲ್ಲ ಮೂಗಿನಲ್ಲಿ ಸಿಂಬಳ ಬಿಟ್ಟುಕೊಂಡು ಆಚೆ ಮನೆ ಹುಡುಗನತ್ರೆ ಜಗಳ ಮಾಡುವ ಪ್ರಾಯದಲ್ಲಿ.. :-)
ಮೈಸೂರಿನಲ್ಲಿ ಇಂಜಿನಿಯರಿಂಗು ಮಾಡಿದ್ದು, ಇಂಜಿನಿಯರಿಂಗು ಮಾಡುವಾಗ ಅಂತೂ, ಈ ಬರ್ದದ್ದಕ್ಕೆ ಒಂದು ವೇದಿಕೆ ಕೊಡ್ಬೇಕು ಅಂತ ಅನಿಸಿಕೆ ಜಾಸ್ತಿ ಆದದ್ದಂತೆ. ಹೆಚ್ಚು ಭಾವುಕರಾಗಿ ವ್ಯವಹರಿಸುವ ಕಾರಣವೋ ಎಂತದ್ದೋ, ಭಾವನೆಗೆ ಸಂಬಂಧ ಪಟ್ಟ ಲೇಖನಗಳ ಒಂದು ಗೊಂಚಲೇ ತಯಾರಾದ ಕೂಡ್ಲೇ ಕೈ ಬರಹದ ಒಂದು ಪತ್ರಿಕೆಗೆ ಜನ್ಮ ಕೊಟ್ಟ್ರು. ಅದ್ರ ಹೆಸರೇ 'ಚೈತ್ರರಶ್ಮಿ' . ಹೀಗೆ ಬೆಳ್ದು ಬೆಳ್ದು ಮುಂದೆ ಕಂಪ್ಯೂಟರಿನಲ್ಲಿ ಟೈಪ್ ಮಾಡಿ ಚೆಂದ ಲೇಔಟ್ ಮಾಡಿ ಪೀಡೀಯಫ್ (PDF) ಪೇಪರು ಮಾಡಿ ಓದುಗ ವೃಂದಕ್ಕೆ ಕಳಿಸ್ತಿದ್ದ್ರಂತೆ.

ಹೀಗೆ ಸುಮಾರು ದಿನ ನಡೀತಾ ಇತ್ತು, ಒಂದು ದಿನ ಅವ್ರನ್ನು 'ಮನು ಅಕ್ಕ ' ನ ನೂಪುರ ವಾರ್ಷಿಕೋತ್ಸವದಲ್ಲಿ ಭೇಟಿ ಮಾಡಿದೆ, ಸ್ವಲ್ಪ ಹೊತ್ತು ಮಾತಾಡುವಾಗ್ಲೇ ಗೊತ್ತಾಯ್ತ, ಜನ ಸ್ವಲ್ಪ ಉಶಾರುಂಟು ಅಂತ. ಅವ್ರ ಮನಸ್ಸಿನ ಆಲೋಚನೆಗಳ ಬಗ್ಗೆ ಎಲ್ಲ ಸ್ವಲ್ಪ ವಿಚಾರ ವಿನಿಮಯ ಆಯ್ತು. ಚೈತ್ರರಶ್ಮಿಯ ಹುಟ್ಟು ಬೆಳವಣಿಗೆ ಯ ವಿವರಣೆ ಸಿಕ್ಕಿದ್ದು ಅಲ್ಲಿಯೇ ನನಿಗೆ. 'ಗ್ರಾಮೀಣ ಯುವ ಬರಹಗಾರರಿಗೆ ಒಂದು ವೇದಿಕೆ' ಅಂತ ತನ್ನ ವಿವರವನ್ನು ತಿಳಿಸಿದರು. ಅದೂ ಅಲ್ಲದೆ, ೩ನೆ ಕೆಲವು ಸಂಚಿಕೆಗಳನ್ನು ಕೊಟ್ಟ್ರು. ಕುಶಿ ಆಯಿತು ಮಾರ್ರೆ ನನಿಗೆ. ಬರೀವವ್ರೆ ಇಲ್ಲ ಈಗ, ಅಂತದ್ರಲ್ಲಿ ಬರೀರಿ ಬರೀರಿ ಅಂತ ಪ್ರೋತ್ಸಾಹ ಕೊಟ್ಟು , ತನ್ನ ಆ ಪತ್ರಿಕೆಯಲ್ಲಿ ಪ್ರಕಟ ಮಾಡಿ, ತಾನೆ ವಿತರಣೆ ಸ ಮಾಡಿ ಆ ಮೂಲಕ ಸರಸ್ವತಿ ಸೇವೆ ಮಾಡಿಕೊಂಡು ಇರುವ ನಮ್ಮ ರಾಚಂ ಗೆ ಒಂದು ನಮಸ್ಕಾರ ನನ್ನದು. ಇಷ್ಟು ಹೇಳಿ ಒಂದು ವಿಷಯ ಹೇಳ್ಬೇಕು ನಾನು, ಈ ಚೈತ್ರ ರಶ್ಮಿ ಅಂತ ಹೇಳುದು ಎಲ್ಲಿ ಸಾ ಮಾರ್ಲಿಕ್ಕೆ ಸಿಗೋದಿಲ್ಲ , ಫ್ರೀ ಆಗಿ ಮಾತ್ರ ಇರೂದು.

ಈಗ ಅವ್ರ ಪೇಪರು ವೆಬ್ಸೈಟ್ ನಲ್ಲಿ ಸ ಸಿಗ್ತದೆ, http://chaitrarashmi.com ಅಂತ ಕೊಟ್ರೆ ಎಲ್ಲ ಓದ್ಲಿಕ್ಕೆ ಸಿಗ್ತದೆ. ಹೇಳಿದ ಹಾಗೆ, ರಾಚಂ ಹೇಳಿದ್ರೆ 'ರಾಮ ಚಂದ್ರ ಹೆಗಡೆ' ಅಂತ. 9986372503 ಅವ್ರ ಫೋನು ನಂಬರು. ಖಂಡಿತ ಫೋನ್ ಮಾಡಿ, ಚೆಂದಕೆ ಮಾತಾಡ್ತಾರೆ. ಲೇಖನ ಬರೀಲಿಕೆ ಸ್ಫೂರ್ತಿ ಸಾ ಅವ್ರೆ ಕೊಡ್ತಾರೆ. ನೀವು ಸದ್ಯ ಬರ್ದ ಲೇಖನ ಕಳಿಸಿ, ಹೇಗೆ ಉತ್ತರ ಬರ್ತದೆ ನೋಡಿ. (ನನ್ನತ್ರ ಸ ಒಂದು ಬರೀಲಿಕ್ಕೆ ಹೇಳಿ ಹೇಳಿ, ನಾನು ಕೂಡಾ ಕಳಿಸ್ತೇನೆ ಅಂತ ಹೇಳಿ ಹೇಳಿ, ಈಗ ಹೇಳೂದನ್ನೇ ಬಿಟ್ಟಿದ್ದಾರೆ... :-D )

ರಾಚಂನಂತಹ ಕನ್ನಡ ಮಕ್ಕಳು ಇರುವಾಗ ಬರಹಗಾರರ ಬದುಕೇ ಚೈತ್ರ-ರಶ್ಮಿ. ಇದ್ರಲ್ಲಿ ಸಂಶಯ ಇಲ್ಲ.

Monday, November 3

ಶ್ರೀ ಎಸ್.ಎಲ್.ಭೈರಪ್ಪ ನಮ್ಮ ಪುತ್ತೂರಿನಲ್ಲಿ !!!

ನಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಉಂಟಲ್ಲ, ನಿನ್ನೆ ಅಲ್ಲಿ ಭಾರತೀಯ ವಿಕಾಸ ಪರಿಷತ್ತು, ಕನ್ನಡ ಸಂಘ , ವಿವೇಕಾನಂದ ಕಾಲೇಜು ಕನ್ನಡ ಸಂಘ ಮತ್ತು ಚುಟುಕ ಸಾಹಿತ್ಯ ಪರಿಷತ್ತು ಇವ್ರೆಲ್ಲ ಸೇರಿ ಅಗ್ರಗಣ್ಯ ಕಾದಂಬರಿಕಾರ ಶ್ರೀ ಎಸ್ ಎಲ್ ಭೈರಪ್ಪ ಅವ್ರ ಸಾಹಿತ್ಯಗಳ ವಿಚಾರ ವಿಮರ್ಶೆ, ಸಂವಾದ ಮತ್ತೆ ಸನ್ಮಾನ ಕಾರ್ಯಕ್ರಮ ಮಾಡಿದ್ರು!
ಭಯಂಕರ ಗೌಜಿಯಲ್ಲಿ ಆಯ್ತು ಗೊತ್ತುಂಟ!!!

ಎಲ್ಲಿಯೂ ಸನ್ಮಾನಕ್ಕೆ ತಲೆ ಕೊಡದ ಈ ಭೈರಪ್ಪ ನಮ್ಮ ಪುತ್ತೂರಿನವ್ರ ಕೈಗೆ ಹೇಗೆ ಸಿಕ್ಕಿದ್ದ್ರೂ ಅಂತ ನನಿಗೆ ಬಯಂಕರ ಆಶ್ಚರ್ಯ ! ಬೆಳಿಗ್ಗೆ ಅವ್ರ ಪರ್ವ, ದಾಟು ಮತ್ತು ವಂಶವೃಕ್ಷಗಳ ಮೇಲೆ ನಮ್ಮ ಲಕ್ಷ್ಮೀಶ ತೋಳ್ಪಾಡಿ, ರಾಮಚಂದ್ರ ದೇವ ಮಾತಾಡಿದ್ರು.
ಮತ್ತೆ ಮಧ್ಯಾಹ್ನ ಒಂದು ಗಟ್ಟಿ ಊಟ ಆಯ್ತು , ಮದ್ಯಾನ್ನ ಮೇಲೆ ಬಂದವರ ನೇರ ಸಂವಾದ ಕಾರ್ಯಕ್ರಮ - ಭೈರಪ್ಪರೊಟ್ಟಿಗೆ ಅಂತ ಮಾಡಿದ್ರು. ಭೈರಪ್ಪನವರಿಗೆ ಯಾರುಬೇಕಾದ್ರೂ ಪ್ರಶ್ನೆ ಕೇಳ್ಬೌದು, ಸಮದಾನದಲ್ಲಿ ಉತ್ತರ ಕೊಡ್ತಾರೆ! ಪ್ರಶ್ನೆ ಕೇಳುವವರು ಅವ್ರ ಹೆಸ್ರು ಮತ್ತೆ ವೃತ್ತಿ ಮೊದ್ಲು ಹೇಳ್ಬೇಕು ಅಂತ ಎನೌನ್ಸ್ ಮಾಡಿದ್ರು ಅಲ್ಲಿ.

ವಿಷಯ ಎಂತ ಗೊತ್ತುಂಟ? ಪ್ರಶ್ನೆ ತುಂಬ ಜೆನ ಕೇಳಿದ್ರು, ಮ್, ಅದ್ರಲ್ಲಿ ಒಬ್ಬೊಬ್ಬ್ರು ಒಂದೊಂದು ಕೆಲ್ಸ ಮಾಡುವವರು: ವಕೀಲ, ಗೃಹಿಣಿ, ಬಿಸ್ನೆಸ್ , ಲೆಕ್ಚರು , ಮಾಷ್ಟ್ರು , ಟೀಚರು, ಸಾಹಿತಿ, ಸಾಫ್ಟ್ವೇರ್ ಇಂಜಿನಿಯರು ;-) - ಹೀಗೆ ನಮುನೆ ನಮುನೆ ಜೆನ ಎಲ್ಲ ಪ್ರಶ್ನೆ ಕೇಳಿದ್ರು. ಅದೇ ನೋಡಿ ನಮ್ಮ ಭೈರಪ್ಪನವರ ಪವರು!
ಬರೇ ಹೋತ ಗಡ್ಡ ಬಿಟ್ಟ ಒಂದು ೩೦-೩೫ ವರ್ಷದ ಬುದ್ಧಿಜೀವಿಗಳು ಮಾತ್ರ ಪ್ರಶ್ನೆ ಕೇಳಿದ್ರೆ ಅದು ಒಂದು ಟೈಪು - ಹೀಗೆ ಎಲ್ಲಾ ನಮುನೆಯ ಜೆನ ಕೇಳಿದ್ರೆ ಅದೇ ಒಂದು ಟೈಪು; ಅಲ್ವಾ? ಎಂತ ಹೇಳ್ತೀರಿ?

ನಂಗೆ ಕುಶೀ ಆಯಿತು ಅದನ್ನು ನೋಡಿ. ಹತ್ರ ಕೂತ ನಮ್ಮವ್ರು "ನೋಡು ಮಾರಾಯ! ಆರೆಲ್ಲ ಬೈಂದವು ಹೇಳಿ" - ಹೇಳಿ ಹೇಳಿದ್ರು, ಬದೀಯಲ್ಲಿ ಶಾಲು ಹಾಕಿ ಕೂತ ನಮ್ಮ ಮಾಲಿಂಗೆಶ್ವರ ದೇವಸ್ಥಾನದ ಪೂಜೆಬಟ್ರನ್ನು ತೋರಿಸಿಕೊಂಡು !
ಹೌದು ಕೂಡ. ಉದ್ದ ಲಂಗ ಹಾಕಿದ ಕೂಸುಗಳಿಂದ ಹಿಡಿದು ಪೂರ್ತಿ ಗಡ್ಡ ಬಿಟ್ಟ ಸಾತ್ವಿಕರ ವರೆಗೆ ಸಾಮಾನ್ಯ ಎಲ್ಲೊರೂ ಬಂದಿದ್ದಾರೆ. ಆ ಸಭಾಂಗಣ ಪುಲ್ ಆಗಿತ್ತು ಮಾರಾಯ್ರೇ ! ಕೆಲವು ಜೆನ ನಮ್ಮ ಊರಿಂದ ಎಲ್ಲ ಬೆಳಿಗ್ಗೆ ಸಿಟಿ ಬಸ್ಸಿಗೇ ಬಂದು ಕೂತಿದ್ದ್ರು :-) .

ವಿವೇಕಾನಂದ ಕೊಲೇಜು ಉಂಟಲ್ಲ, ಅಲ್ಲಿಯ ಕನ್ನಡ ಸಂಘ ದ ಮುಖ್ಯ ಪಾತ್ರ ಅಂತೆ ಇದ್ರಲ್ಲಿ. ಕೊಲೇಜಿನ ಲೆಕ್ಚರು , ಪ್ರಿನ್ಸಿಪಾಲರು , ಮಕ್ಳು, ಕ್ಲಾರ್ಕು - ಎಲ್ಲ ಇದ್ರು ಅಲ್ಲಿ :-)
ಸನ್ಮಾನ ಕಾರ್ಯಕ್ರಮ ಅಂತ ಇತ್ತು ಅಕೇರಿಗೆ - ಅದ್ರಲ್ಲಿ ಯಾರು ಬೇಕಾದ್ರೂ ಮಾಲೆ ಹಾಕ್ಬೌದು ಅಂತ ಹೇಳಿದ್ರು. ಆದ್ರೆ ಎಂತ ಮಾಡುದು, ನನಿಗೆ ಬೆಂಗ್ಳೂರು ಬಸ್ಸಿಗೇ ಲೇಟಾಗ್ತದೆ ಅಂತ ಬೇಗ ಹೊರಟದ್ದು ನಾನು.
ಪುತ್ತೂರಿನ ಘಟಾನುಘಟಿಗಳಾದ ಉರಿಮಜಲು ರಾಮಜ್ಜ, ಜಿ ಯಲ್ ಆಚಾರ್ಯ, ವಿ ಬಿ ಅರ್ತಿಕಜೆ, ಅವ್ರು, ಇವ್ರು ಎಲ್ಲ ಬಂದು ಸೇರಿದ್ರು. ಕಾರ್ಯಕ್ರಮ ತುಂಬ ಚೆಂದ ಇತ್ತು.

ಕಾರ್ಯಕ್ರಮ ದ ಅರ್ಧದಲ್ಲಿ ಹೊರಡುವಾಗ ನಾನು ಹತ್ತಿರ ಕೂತವ್ರ ಹತ್ರೆ ಕೇಳಿದೆ:
ಇಲ್ಲಿಗೆ ಬಂದವರಲ್ಲಿ ಎಲ್ಲೊರು ಒಂದು ಲೆಕ್ಕದಲ್ಲಿ ಬುದ್ಧಿ ಜೀವಿಗಳೇ ಅಲ್ವ? ಮತ್ತೆ ಎಂತಕೆ ಅವ್ರು ಹಾಗೆ ಹೇಳಿಕೊಳ್ಳುದಿಲ್ಲ! - ಅಂತ !!! ತಲೆ ಅಡ್ಡಡ್ಡ ಆಡಿಸಿ ನೆಗಾಡಿದ್ರು, ಕಾರಣ ಗೊತ್ತಿಲ್ಲ ಅಂತ :-)
ಕಾರಣ ನಿಮಿಗೆ ಗೊತ್ತುಂಟ ಮಾರಾಯ್ರೇ ?

Thursday, June 12

ಕರಾವಳಿಗೆ ಬಂದ ಜ್ವರದ ಮಾರಿ...

ಹೋ, ಬರಿಯದೆ ಸ್ವಲ್ಪ ದಿನ ಆಯ್ತು ನೋಡಿ, ವಿಷಯ ಎಂತ ಆಯ್ತು ಹೇಳಿದ್ರೆ , ನನ್ನ ಕಂಪ್ಯೂಟರಿಗೆ ಚಿಕ್ಕುನ್ ಗುನ್ಯ ಬಂದಿದೆ. ಅದರ ಗಂಟು ಗಂಟು ಪೂರ ಬೇನೆ. ಈಗ ಒಂದು ಒಮ್ಯೋಪತಿ ಮದ್ದು ಉಂಟು . ಬೇರೆ ಯಾವುದೂ ನಾಟುದಿಲ್ಲಂತೆ. ಹಾಗೆ. ಕಮ್ಮಿ ಆದ ಕೂಡ್ಲೇ ಬರೀತೇನೆ, ಆಯ್ತಾ . ;-(

Friday, May 9

ಹಠವಾದಿ ರಾಮಜ್ಜನೂ, ಆಶಾವಾದಿ ಶೋಭಕ್ಕನೂ . . .

ಪ್ರತೀ ಸರ್ತಿ ಓಟು ಬಂದಾಗ ಸ ನಮಿಗೆ ಒಂದು ಗೌಜಿ..

ಸುಮ್ಮನೆ, ಆಚೀಚೆ ಮನೆಯವ್ರು ಸೇರಿಕೊಂಡು ಮಾತಾಡ್ಲಿಕ್ಕೆ. ಎಲೆ ತಿಂದು ತುಪ್ಪಿ, ಮತ್ತೆ ತಿಂದು ತುಪ್ಪಿ, ಮತ್ತೆ ಮತ್ತೆ ತುಪ್ಪುವ ಆ ಒಂದು ಸೆಶನ್ ಉಂಟಲ್ಲ, ಆಗ ವಾಜ್ಪೇಯಿ, ಅಡ್ವಾಣಿ ಅಜ್ಜ, ಪೆರ್ನಾಂಡೀಸ್ಸು, ನೆಹರು , ಅವ್ರು, ಇವ್ರು ಎಲ್ಲರೂ ನಮ್ಮ ಪರಮಾಪ್ತರ ಹಾಗೆ ಬಂದು ಹೋಗ್ತಾರೆ. ನಿಷ್ಟುರ ಕಮೆಂಟುಗಳಿಗೆ ಹೆಸರಾದ ನಮ್ಮ ಹಳಬರು ಈ ಎಲ್ಲೊರನ್ನೂ ತರಾಟೆಗೆ ತೆಕ್ಕೊಳ್ತಾರೆ. ಅದನ್ನು ನೋಡ್ಳಿಕ್ಕೆ ನಿಮಿಗೆ ಬೇಕಾದ್ದು ತಾಳ್ಮೆ ಮಾತ್ರ!

ಈಗ ಸ ಓಟಿನ ಟೈಮು. ವಾರಾಂತ್ಯ ಊರಿಗೆ ಹೋಗಿದ್ದೆ, ಕೆಮಿಗೆ ಬಡೀತಾ ಇತ್ತು, ರಾಜಕೀಯ ವಿಮರ್ಶೆಗಳು. ನಮ್ಮ ದೇಶಕ್ಕೆ ವಾಜ್ಪೇಯಿ ಹೇಗೋ, ನಮ್ಮ ಪುತ್ತೂರಿಗೆ ರಾಮಜ್ಜ ನೂ ಹಾಗೆಯೇ. ರಾಮಜ್ಜ ಅಂದ್ರೆ, ಶ್ರಿ. ಉರಿಮಜಲು ರಾಮ ಭಟ್ ಅಂತ ಅವರ ಹೆಸರು, ಪುತ್ತೂರಿನ ಬೇರು ಬೇರು ಅರ್ದು ಕುಡಿದವರು. ಅವತ್ತು ಇಡೀ ದೇಶದಲ್ಲೇ ಕೋಂಗ್ರೇಸಿನ ಅಲೆ ಇತ್ತಲ್ವ, ನಮ್ಮ ದೇಶ ಆಳ್ಬೇಕಾದ್ರೆ ನೆಹರು ಕುಟುಂಬವೇ ಆಗ್ಬೇಕು ಅಂತ, ಆ ಟೈಮಿನಲ್ಲಿ ನಮ್ಮ ಪುತ್ತೂರಿನಲ್ಲಿ ಜನಸಂಘದ ದ್ಯೇಯ - ಉದ್ದೇಶಗಳನ್ನು ಪ್ರಚಾರ ಪಡಿಸಿದವರು, ಪುತ್ತೂರು ಮಾತ್ರ ಅಲ್ಲ ಮಾರಾಯ್ರೇ, ನಮ್ಮ ಇಡೀ ಮಂಗ್ಳೂರಿನಲ್ಲಿ ಈಗ ಇರುವ ಆರ್.ಯಸ್.ಯಸ್ , ವಿ.ಹಿಂ.ಪ , ಬಿ.ಜೆ.ಪಿ ಎಲ್ಲವೂ ಗಟ್ಟಿಗೆ ತಾಯಿಬೇರು ಬಿಡ್ಳಿಕ್ಕೆ ಕಾರಣ ಅವ್ರೇ. ಒಂದು ವಿಶಯ ಹೇಳ್ತೇನೆ, ೧೯೬೫ ರ ಹೊತ್ತಿಗೆ ಪುತ್ತೂರಿನಲ್ಲಿ ಕೋಲೇಜು ಅಂತ ಇದ್ದದ್ದು ಫಿಲೋಮಿನ ಮಾತ್ರ. ಒಂದೇ ಕೋಲೇಜು ಇದ್ದ ಕಾರಣ ಎಷ್ಟು ಕೇಳಿದ್ರೂ ನಡೀತದೆ ಅಂತ ಫೀಸು ತೆಕ್ಕೊಳ್ಳಿಗೆ ಸುರುಮಾಡಿ ಅದು ಕಂಡಾಬಟ್ಟೆ ಆಯ್ತು. ಪಾಪದವ ಕೋಲೇಜಿಗೆ ಹೋಗುದು ಹೇಗೆ? ಆಗ ಈ ರಾಮಜ್ಜನ ನೇತೃತ್ವದ ಕೆಲವು ಯುವ ಚಿಂತಕರು (ಈಗಿನ ಬುದ್ದಿಜೀವಿಗಳ ಹಾಗೆ ಅಲ್ಲ ಆಯ್ತ!) ಎಲ್ಲ ಸೇರಿ , ’ನಮಿಗೆ ಪಾಪದವರಿಗೆ ಆಗುವ ಹಾಗೆ ಒಂದು ಕೋಲೇಜು ಆಗ್ಬೇಕು’ ಅಂತ ಹಟ ತೊಟ್ಟು ಕೆಲಸ ಸುರು ಮಾಡಿದ್ರು. ಅದಿಕ್ಕೆ ಪೈಸೆ ಬೇಕಲ್ಲ, ಅವರ, ಮತ್ತೆ ಅವರ ಮಿತ್ರರ ಜಾಗೆಯ ಕ್ರಯಚ್ಚೀಟುಗಳನ್ನು ಬೇಂಕಿನಲ್ಲಿ ಇಟ್ಟು ಸಾಲ ತೆಗ್ದು, ಅವರ ಇವರ ಹತ್ತಿರ ಎಲ್ಲ ದುಡ್ಡು ಕೇಳಿ ಒಂದು ಕೋಲೇಜು ಕಟ್ಟ್ಳಿಕ್ಕೆ ಸುರು ಮಾಡಿದ್ರು. ಈಗ ಅದು ಪುತ್ತೂರಿನ ಎಲ್ಲ ಸ್ಪರ್ಧೆಗಳನ್ನೂ ಮೀರಿ ನಂಬರ್-೧ ಕೋಲೇಜು ಆಗಿ ರೈಸಿಕೊಂಡು ಉಂಟು. ಈಗ್ಲೂ ಅದನ್ನು ರಾಮಜ್ಜನ ಕೋಲೇಜು ಅಂತ ಹೇಳ್ತಾರೆ ಹಳಬ್ಬರು. ಆ ಕೋಲೇಜಿನ ಒಟ್ಟಿಗೆ ಮತ್ತೆ ೧೩ ವಿದ್ಯಾ ಸಂಸ್ಥೆ ಮಾಡಿ, ಬಾಲವಾಡಿಯಿಂದ ಇಂಜಿನಿಯರು ಕಲಿಯುವ ವರೆಗೆ ಸಾಮಾನ್ಯ ಮಕ್ಕಳಿಗೆ ಸಾ ವಿದ್ಯೆ ಸಿಕ್ಕುವ ಹಾಗೆ ಮಾಡಿ ತನ್ನ ಮೈಯಲ್ಲಿ ಇನ್ನೂ ತಾಕತ್ತು ಇರುವಾಗಲೇ ಆ ಕೋಲೇಜಿನ ಸಂಚಾಲಕತ್ವವನ್ನು ಬಿಟ್ಟು ಕೊಟ್ಟು, ಈಗ ನಮ್ಮ ನಿಮ್ಮ ಹಾಗೇ ಅದರ ಹೊಳಪನ್ನು ನೋಡ್ತಾ ಇದ್ದಾರೆ. ಸಾಯುವ ತನಕ ಕುರ್ಚಿ ಬಿಡೂದಿಲ್ಲ ಅಂತ ಹೇಳುವ ಬೇರೆ ರಾಜಕಾರಣಿಯ ಎದುರು ಇವರು ತುಂಬ ತಾತ್ವಿಕವಾಗಿ ಕಾಣ್ತಾರೆ. ಎಂತ ಹೇಳ್ತೀರಿ, ಹೌದಾ ಅಲ್ವ? ಆದ್ರೆ ಒಂದುಂಟು, ಇವ್ರಿಗೆ ಸ್ವಲ್ಪ ಹಠ ಜಾಸ್ತಿ ಮಾರಾಯ್ರೇ.. ಹಿಡಿದದ್ದನ್ನು ಬಿಡುವಂತವ್ರಲ್ಲ. ತತ್ವ ಬದಲಿಸ್ವುವವರಲ್ಲ, ಧ್ಯೇಯದೊಟ್ಟಿಗೆ ರಾಜಿ ಮಾಡಿಕೊಳ್ಳುವವರಲ್ಲ. ಈಗಿನ ರಾಜಕಾರಣಿಗಳ ಹಾಗೆ ಓತಿ ಬುದ್ದಿ ಇಲ್ಲ. ಅಷ್ಟಿದ್ದ ಕಾರಣವೇ ಅವ್ರು ಸಾಧನೆ ಮಾಡ್ಳಿಕ್ಕೆ ಆಯ್ತು, ಅಲ್ವ?

ಮೊದ್ಲು ಇವ್ರು ಓಟಿಗೆ ನಿಲ್ತಾ ಇದ್ರು ನೋಡಿ, ಸಿಕ್ಕಿಕೋಂಡು ಇದ್ದದ್ದು ೭೦೦ - ೮೦೦ ಓಟು ಆದ್ರೂ, ಕಟ್ಟಿದ ದುಡ್ಡು (ಠೇವಣಿ) ಹೋದ್ರೂ ತಲೆಬೆಶಿ ಮಾಡದೆ, ಪ್ರತೀ ಸರ್ತಿ ಕೂಡಾ ಸ್ಪರ್ಧೆ ಕೊಡ್ತಾ ಇದ್ರಲ್ಲ, ಅದಿಕ್ಕೆ ಅವ್ರ ತತ್ವ ಕಾರಣ ಅಂತ. ಹಾಗೆ ಇವ್ರು ಶಾಸಕರೂ ಆದ್ರು ಒಮ್ಮೆ. ಆಗಿನ ಕಾಲದಲ್ಲಿ ಎಲ್ಲ ನಮ್ಮ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರು ’ಜನಸಂಘ’ ಅಂತ ಹೇಳೂದನ್ನು ’ರಾಮ ಭಟ್ಟ್ರ ಪಾರ್ಟಿ’ ಅಂತ ಹೇಳ್ತಾ ಇದ್ರಂತೆ. ಅಷ್ಟು ಪ್ರಭಾವ ಇತ್ತು ಅವ್ರಿಗೆ. ಅದಿರ್ಲಿ, ಅಧಿಕಾರ ದಾಹ ಅವ್ರಿಗೆ ಇರ್ಲಿಲ್ಲ ನೋಡಿ, ಮುಂದಿನ ಯುವ ನಾಯಕರನ್ನು ಬೇಗ ಬೆಳೆಸುವ ಅಂತ ಅವರಿಗೆ ವಿಶ್ವಾಸ ಬಂದ ಒಬ್ಬನನ್ನು ಮುಂದೆ ಮಾಡಿದರು. ಸ್ವತಃ ವಕೀಲರಾದ ರಾಮಜ್ಜರಿಗೆ ಕಂಡದ್ದು ಒಬ್ಬ ಯುವ ವಕೀಲನೇ. ಮುಂದಿನ ಯಮ್.ಯಲ್.ಏ ಓಟಿಗೆ ನಿಲ್ಲಿಸಿದ್ದೇ ಆ ಯುವಕನನ್ನು. ಆ ಯುವಕನ ಹೆಸ್ರು ಆಗ ಡಿ.ವಿ.ಸದಾನಂದ ಅಂತ (ಈಗ ’ಗೌಡ’ ಅಂತ ಜಾತಿ ರಾಜಕೀಯ ಕೂಡ ಬಂದಿದೆ ಬಿಡಿ). ಎಲ್ರೂ ಡೀವಿ ಅಂತ ಹೇಳ್ಲಿಕ್ಕೆ ಸುರು ಮಾಡಿದ್ರು. ಆ ಓಟಿನಲ್ಲಿ ಗೆದ್ದು, ಪುತ್ತೂರಿನ ಶಾಸಕ ಆಗಿ, ಗುರುಗಳ ಮಾರ್ಗದರ್ಶನದಲ್ಲಿ ಕ್ಷೇತ್ರಾಭಿವೃದ್ಧಿ, ಮತ್ತೆ ಇತರ ಕೆಲಸ ಕಾರ್ಯಗಳು ಆಯ್ತು ಆ ಸಮಯದಲ್ಲಿ. ಈ ರಾಮಜ್ಜ ಗುರುಗಳಾಗಿ ಎಲ್ಲಿಯೂ ತಮ್ಮ ಅಧಿಕಾರ ಚಲಾಯಿಸ್ಲಿಕ್ಕೆ ಹೋಗ್ಲಿಲ್ಲ, ಹಾಗಾಗಿ ಆ ಯುವ ನೇತಾರ ಬಾರೀ ಬೇಗ ’ಧೀಮಂತ’ ನೇತಾರ ಆದ್ರು, ಗುರುಗಳು ಮನೆಯಲ್ಲೇ ಉಳಿದ್ರು! ಮುಂದೆ ಆ ಯುವ ಬೆಳ್ದು ಬೆಳ್ದು, ಸಡನ್ನಾಗಿ ಮಂಗ್ಳೂರಿನ ಯಂಪಿ ಆದ್ರು, ಏನೋ ಒಂದು ಚಾನ್ಸ್ ನಲ್ಲಿ, ಆರ್.ಯಸ್.ಯಸ್ ಹಿಂದು ಅಲೆ ಇತ್ತು, ಆದ ಕಾರಣ ಯುವ ಗೆದ್ರು ಅಂತ ಎಲ್ರೂ ಹೇಳಿದ್ರು ಆ ಟೈಮಿನಲ್ಲಿ. ಯಂಪಿ ಆದ ಟೈಮಿನಲ್ಲಿ ಕೂಡಾ ಯುವನಿಗೆ ’ರಾಜಕೀಯ ಗುರು’ ರಾಮಜ್ಜನ ಆಶೀರ್ವಾದ ತೆಕ್ಕೊಳ್ಳಿಕ್ಕೆ ಮರೀಲಿಲ್ಲ ಮಾತ್ರ.

ಈಗ ನೋಡಿ ಕತೆಯ ಟರ್ನ್:
ವಿಧಾನಸಭೆ ಓಟಿಗೆ ನಮ್ಮ ಪುತ್ತೂರಿನಿಂದ ಶಕು ಅಕ್ಕ ನಿಂತಿದ್ರು, ಡೀವಿ ಮಂಗ್ಳೂರಿಗೆ ಹೋದ್ರಲ್ಲ, ಹಾಗೆ. ಗೆಲ್ಲೂದು ಡೌಟು ಅಂತ ಹೇಳ್ತಾ ಇದ್ರು, ಆದ್ರೆ ಈ ಮಹಿಳಾ ಸಂಘ ಇತ್ಯಾದಿಗಳ ’ಗ್ರೌಂಡ್-ವರ್ಕ್’ ನಿಂದಾಗಿ ಅಮೋಘ ಅಂತರದಲ್ಲಿ ಗೆದ್ದುಬಿಟ್ರು. ಅವ್ರ ಗ್ರಾಚಾರಕ್ಕೆ ನಮ್ಮ ವಿದಾನಸಭೆ ಕೂಡಾ ಅತಂತ್ರ ಆಯ್ತು. ಇದ್ರ ಎಡೆಯಲ್ಲಿ, ಯಾವಗ ಅಂತ ಗೊತ್ತಿಲ್ಲ, ನಮ್ಮ ಡೀವಿಯ ಹೆಸ್ರು ಡಿ.ವಿ.ಸದಾನಂದ ಇರೂದು ಡಿ.ವಿ.ಸದಾನಂದ ಗೌಡ ಆಯ್ತು. ರಾಜ್ಯ ರಾಜಕೀಯಕ್ಕೆ ಲಗ್ಗೆ ಇಟ್ಟ ಅವರು ಗೌಡಾಧಿಪತ್ಯದ ಜೆ.ಡಿ.ಯಸ್ ನ ಎದುರು ಜಾತಿಲೆಕ್ಕಾಚಾರದಲ್ಲಿ ಬಡೀಲೆಕ್ಕೆ ನಿತ್ರು. ಕರ್ನಾಟಕ ಬಿ.ಜೆ.ಪಿ ಯ ರಾಜಾಧ್ಯಕ್ಷರಾದ್ರು, ಯೆಡಿಯೂರಪ್ಪನಿಗೆ ಬಯಂಕರ ಹತ್ತಿರ ಆದ್ರು. ಅದರಿಂದಾಗಿ ಶೋಬಕ್ಕನಿಗೂ!

ಯಾರು ಈ ಶೋಬಕ್ಕ? ನಮ್ಮ ಶಕುಅಕ್ಕನ ಊರು ಉಂಟಲ್ವಾ, ಕಡಬ - ಅಲ್ಲಿ ಹತ್ರ ಕರಂದ್ಲಾಜೆ ಅಂತ ಉಂಟಂತೆ, ಅಲ್ಲಿಂದ ಬಂದ ಹುಡುಗಿ. ಈ ಜನ ಪುತ್ತೂರಿನವರಿಗೇ ಸರಿಯಾಗಿ ಗುರ್ತ ಇಲ್ಲ ಅವಳನ್ನು, ಮತ್ತೆ ಉಳಿದವರಿಗೆ ಎಷ್ಟು ಇರ್ಬೌದು? ಕಳೆದ ಸರ್ಕಾರ ಇರುವಾಗ್ಳೇ ಅವಳ ಹೆಸ್ರು ಅಲ್ಲಲ್ಲಿ ಕೇಳ್ತಾ ಇತ್ತು, ಈಗ ಓಟಿನ ಟೈಮಿನಲ್ಲಿ ಮತ್ತೂ ಜಾಸ್ತಿ... ಅವ್ಳಿಗೆ ಟಿಕೇಟ್ ಕೊಟ್ರಂತೆ, ಬೆಂಗ್ಳೂರಿನ ಯಶವಂತಪುರದಲ್ಲಿ. ಕೊಡ್ಳಿ ಅಪ್ಪ, ಯಾರಿಗೆಂತ? ಆದ್ರೆ ಕಳಿದ ಸರ್ತಿ ಪುತ್ತೂರಿನಲ್ಲಿ ಆಶ್ಚರ್ಯಕರ ಮಾರ್ಜಿನ್ನಿನಲ್ಲಿ ಗೆದ್ದ ಶಕು ಅಕ್ಕನಿಗೆ ಎಂತಕೆ ಟಿಕೇಟಿಲ್ಲ? ಅದೂ ನಮ್ಮ ರಾಜ್ಯಾಧ್ಯಕ್ಷರ ಊರಿನಲ್ಲಿ? ಶಕು ಮಾಡಿದ ತಪ್ಪಾದರೂ ಎಂತದ್ದು? ಅದು ನಮ್ಮ ರಾಮಜ್ಜನ ಪ್ರಶ್ನೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಕೇಳುವ ಇನ್ನೊಂದು ಹೆಸರು ನಮ್ಮ ಆರೆಸ್ಸೆಸ್ ಭಟ್ರದ್ದು. ಕಲ್ಲಡ್ಕದ ಪ್ರಭಾಕರ ಭಟ್ರು ಚರಿತ್ರೆಯಲ್ಲಿ ಸುಮಾರು ಹೆಸರು ಮಾಡಿದ ಪೈಕಿ. ನಮ್ಮ ದ.ಕ ದ ಬಿ.ಜೆ.ಪಿ ಮತ್ತು ಆರೆಸ್ಸೆಸ್ ನ ಸಂಬಂಧದ ದೊಡ್ಡ ಕೊಂಡಿ ಅವರು. ನಮ್ಮೂರಿನ ಎಲ್ಲ ಬಿಜೆಪಿ ಶಾಸಕ ಟಿಕೇಟುಗಳೂ ಅವರು ಹೇಳಿದವ್ರಿಗೆ ಮಾತ್ರ ಕೊಡ್ತಾರಂತೆ. ಅವ್ರು ಈ ಸಲದ ಟಿಕೇಟು ಶಕುಅಕ್ಕನ ಬದಲು ನಮ್ಮ ಪ್ರಸಾದ್ ಬಂಡಾರಿ ಡಾಕ್ಟ್ರ ಬುಡೆತಿಗೆ ಕೊಡಿಸಿದ್ದಾರೇಂತ. ತಾವು ಕಟ್ಟಿದ ತತ್ವ, ನಿಷ್ಠೆ ಇತ್ಯಾದಿ ರಾಜಕಾರಣ ತನ್ನ ಕಣ್ಣಿನ ಎದುರಿಗೇ ಸಾಯ್ತಾ ಇರೂದು ಕಂಡು ನಮ್ಮ ರಾಮಜ್ಜನಿಗೆ ಪಿಸುರುಬಂದು ಕೇಳಿಯೇ ಬಿಟ್ರು.
ಆಗ ನೋಡಿ ಹೊತ್ತಿಕೊಂಡದ್ದು.. ಡೀವಿ ಕಟ್ಟಿಸಿದ ಎಲ್ಲಾ ಪೆಟ್ರೋಲು ಬಂಕುಗಳಿಗೂ ಒಂದೇ ಸಲಕ್ಕೆ ಕಿಚ್ಚು ಬಿದ್ದ ಹಾಗೆ ಆಯ್ತು ಆಗ ಪುತ್ತೂರು ಬಿಜೆಪಿಯಲ್ಲಿ. ಕೇಳುವವರೇ ಇಲ್ಲ ನನ್ನನ್ನು ಅಂತ ಗ್ರೇಶಿಕೊಂಡಿದ್ದ ಧೀಮಂತ ನಾಯಕನಿಗೆ ಸ್ವಲ್ಪ ಬಿಸಿ ಮುಟ್ಟಿದ್ದು ಆಗ್ಲೇ. ಈ ರಾಮಜ್ಜ ಧೂಳಿನಿಂದ ಬರುವ ತಾಕತ್ತಿನವ್ರು, ಅವ್ರನ್ನು ಎದುರು ಹಾಕಿದ್ರೆ ಪುತ್ತೂರಿನಲ್ಲಿ ಕಷ್ಟ ಅಂತ ಧೀಮಂತ ನಾಯಕನಿಗೆ ಗೊತ್ತಾಗಿ ಹೋಯ್ತು, ಬಿಜೆಪಿಯ ಹಳೆ ತಲೆಗಳನ್ನು - ಅಂದ್ರೆ ರಾಮಜ್ಜನ ಪ್ರಾಕಿನ ಜೊತೆಗಾರರನ್ನು ಸಂಧಾನಕ್ಕೆ ಹೋಗ್ಲಿಕ್ಕೆ ವ್ಯವಸ್ಥೆ ಮಾಡಿದ್ರು, ರಾಮಾ ಜೋಯಿಸ್ ಅವ್ರು - ಇವ್ರು ಎಲ್ಲ ಬಂದ್ರು, ಈ ಹಠವಾದಿಯದ್ದು ಒಂದೇ - ಹಾಲಿ ಶಾಸಕಿಯನ್ನು ಕಣಕ್ಕಿಳಿಸ್ಲಿಕ್ಕೆ ತೊಂದರೆ ಎಂತದ್ದೂಂತ... ಇವ್ರಲ್ಲಿ ಉತ್ತರ ಇಲ್ಲ. ಪಾಪ. ತಿರುಗಿ ಮನೆಗೆ ಹೋದ್ರು.
ನಿಮಿಗೆ ಗೊತ್ತುಂಟಾ? ತೊಂದರೆ ಎಂತದ್ದು? ಉಮ್ಮಪ್ಪ. . .!

ಕೆಲವು ಬೆಚ್ಚ ಬೆಚ್ಚ ಪೋಯಿಂಟ್ ಹೇಳ್ತೇನೆ:
ಬಿ.ಜೆ.ಪಿ ದೃಷ್ಟಿಯಿಂದ:
  • ಬಿಜೆಪಿ ಸಂಸ್ಕೃತಿಯಲ್ಲಿ ಪಾರ್ಟಿ ಮುಖ್ಯ, ವ್ಯಕ್ತಿ ಅಲ್ಲ - ಯಾರು ನಿತ್ರೂ, ಯಾರು ಗೆದ್ರೂ ಆ ಪಕ್ಷದ ಶಿಸ್ತಿನಲ್ಲಿ ಇದ್ರೆ ಆಯ್ತು. 
  •  ಈ ಕಳ್ದ ೩ ವರ್ಷದಲ್ಲಿ ಶಕು ಅಕ್ಕ ಶಾಸಕಿ ಆಗಿ ಎಲ್ಲ ಕೆಲಸ ಮಾಡಿದ್ದಾರೆ, ಆದ್ರೆ ಪಾರ್ಟಿ ಕಟ್ಟುವ ಯಾವ ಕೆಲಸ ಕೂಡಾ ಮಾಡ್ಳಿಲ್ಲ. 
  •  ಶಕುಂತಲಾ ಶೆಟ್ಟಿ ಓಟಿಗೆ ನಿಲ್ಲುವಾಗ ಅವ್ರ ಬಗ್ಗೆ ಎಷ್ಟು ಗೊತ್ತಿತ್ತು ಜನ್ರಿಗೆ, ಹಾಗಿರುವಾಗ ಈ ಸಲ ಇನ್ನೊಬ್ಬ ಹೊಸಬ್ರಿಗೆ ಎಂತಕೆ ಕೊಡ್ಬಾರ್ದು? 
  •  ಮಂತ್ರಿಗಿರಿ ಎಂತದ್ದೋ ಕೊಡ್ಳಿಕ್ಕೆ ಆಗ್ಲಿಲ್ಲ, ಆದ್ರೆ ಗೇರು ನಿಗಮ ಅಧ್ಯಕ್ಷಗಿರಿ ಕೊಡುವಾಗ ಬೇಡಾಂತ ಹೇಳಿದ್ದು ಎಂತಕೆ?
  • ಈ ಶಾಸಕರು, ರಾಜಕಾರಣಿಗಳು ೫ ವರ್ಷ ಬರ್ತಾರೆ, ಹೋಗ್ತಾರೆ, ಅವ್ರ ವಿಷನ್ ೫ ವರ್ಷಕ್ಕಿಂತ ಮುಂದೆ ಹೋಗೂದಿಲ್ಲ, ತುಂಬ ದೂರದೃಷ್ಟಿ ಇರುವ, ಸಮಾಜದ ಕಾಳಜಿ ಇರುವ ಆರೆಸ್ಸೆಸ್ಸಿನಂತ ಸಂಘಟನೆಗಳು ನಮ್ಮ ನಾಯಕರನ್ನು ಆಯ್ಕೆಮಾಡೂದ್ರಲ್ಲಿ ಎಂತದ್ದೂ ತಪ್ಪಿಲ್ಲ.


ಶಕು ಅಕ್ಕನ ದೃಷ್ಟಿಯಿಂದ:
  • ಶಾಸಕಿಯಾಗಿ ಎಲ್ಲ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದಾರೆ, ಮತ್ತೆ ನಮ್ಮ ಸರ್ಕಾರದ ಕೆಲಸದಲ್ಲಿ ಇರುವಾಗ ಪಾರ್ಟಿಕೆಲಸ ಅಂತ ತಿರುಗ್ಲಿಕ್ಕೆ ಆಗ್ತದಾ? 
  •  ಒಂದು ಸಲ ಗೆದ್ರೂ ಪೂರ್ತಿ ೫ ವರ್ಷ ಸಿಕ್ಕ್ಲಿಲ್ಲ, ಮತ್ತೆ ಎಲ್ರಿಗೂ ಎರಡೆರಡು ಅವಕಾಶ ಕೊಟ್ಟಿದ್ದಾರೆ, ಇವ್ರಿಗೆ ಮಾತ್ರ ಎಂತಕೆ ಇಲ್ಲ? 
  • ಪಾರ್ಟಿಯ ಆಂತರಿಕ ವಿಷಯಕ್ಕೆ ಆರೆಸ್ಸೆಸ್ಸಿನವ್ರು ಎಂತಕೆ ತಲೆ ಹಾಕೂದು?
  • ಪ್ರಸಾದ್ ಭಂಡಾರಿಯನ್ನು ಆದ್ರೆ ಎಲ್ಲೊರಿಗೂ ಗೊತ್ತುಂಟು, ಅವ್ರ ಹೆಂಡತ್ತಿಯನ್ನು ಯಾರಿಗೆ ಗೊತ್ತುಂಟೂಂತ ನಿಲ್ಲಿಸೂದು? 
  •  ಎಂತದ್ದೂ ತಪ್ಪು ಮಾಡ್ಲಿಲ್ಲ. ಟಿಕೇಟು ಕೊಡ್ಲಿಲ್ಲ ಎಂತಕೆ?


ಕೆಲಾವು ಜನರ ಸ್ವಗತಗಳು:
  • ಬೀಜೇಪಿಯ ಹೆಗ್ಗಣಗಳಿಗೆ ನುಂಗ್ಲಿಕ್ಕೆ ಬಿಡ್ಳಿಲ್ಲ ಈ ಶಕುಅಕ್ಕ, ಅದಿಕ್ಕೆ ಟಿಕೇಟು ಕೊಡ್ಳಿಲ್ಲ. 
  •  ಡೀವಿಗೇ ಮಂತ್ರಿ ಆಗ್ಲಿಕ್ಕೆ ಚಾನ್ಸು ಸಿಕ್ಲಿಲ್ಲ, ಇನ್ನು ಈ ಸಲ ಶಕು ಅಕ್ಕ ನಿತ್ರೆ, ಅವ್ರು ಗೆದ್ದು ವಿದಾನಸೌದಕ್ಕೆ ಹೋದ್ರೆ ಅವ್ರಿಗೆ ಮಂತ್ರಿಗಿರಿ ಕೊಡ್ಬೇಡ್ವಾ? ಆಗ ಧೀಮಂತ ನಾಯಕರು ಚಪ್ಪೆ ಆಗ್ಲಿಲ್ವ? 
  •  ಮ್, ಇನ್ನೊಂದು ಸ್ವಲ್ಪ ಗುಟ್ಟು - ಡೀವಿಯ ಸೇವೆ ಏನಿದ್ರೂ ಅದು ಕರ್ನಾಟಕ ಬಿಜೆಪಿ ಅಧ್ಯಕ್ಷಗಿರಿಯ ಒಳಗೇ ಇರ್ಬೇಕಲ್ವ? ಈ ಶೋಬಕ್ಕನಿಗೆ ಮಂತ್ರಿ ಸೀಟಿನಲ್ಲಿ ಕೂರ್ಬೇಕೂಂತ ಬಯಂಕರ ಆಸೆ, ಪಾಪ ಬೇರೆ ದಾರಿ ಉಂಟ, ಮತ್ತೆ ಬರ್ಬೌದಾದ ಆ ತೊಂದ್ರೆಯನ್ನು ಈಗ್ಲೇ ನಿವಾರಿಸುವ ದೂರಾಲೋಚನೆ ನಮ್ಮ ಯಡಿಯೂರಪ್ಪನಿಗೆ - ಶಕುಅಕ್ಕ ಇದ್ದಾರಲ್ಲ, ಬಲಿ ಕೊಡುವ ಅಂತ ಆಯಿತು. ಅವ್ರಿಗೆ ಬೇಜಾರು ಕೂಡಾ ಆಗ್ಬಾರ್ದು ತನಿಗೆ ಸೀಟಿಗೆ ಕೂಡಾ ತೊಂದ್ರೆ ಆಗ್ಬಾರ್ದು, ಎಂತ ಮಾಡುದು - ಸುಮ್ನೆ ಕೂತ್ರು ಧೀಮಂತ ನಾಯಕ ಡೀವಿ..
  •  ಮುತ್ತಪ್ಪಣ್ಣನ ಫೋನ್ ಬರ್ತಾ ಉಂಟಂತೆ ,ಶಕುಅಕ್ಕನಿಗೆ ಓಟು ಹಾಕ್ಲಿಕ್ಕೆ ಹೇಳಿಕೊಂಡು.

ಏನೇ ಆದ್ರೂ, ರಾಮಜ್ಜ ಅವರ ಜೀವಮಾನದ ಮೊದಲ ಬಾರಿಗೆ ಬಿಜೆಪಿ ಬಿಟ್ಟು ಬೇರೆ ಕ್ಯಾಂಡಿಡೇಟಿಗೆ ಓಟು ಹಾಕ್ತಾ ಇದ್ದಾರೆ.

ಶೋಬಕ್ಕನ ಆಸೆಯ ಎದುರು ರಾಮಜ್ಜನ ಅವತ್ತಿನ ಬೆವರಿನ ಶಕ್ತಿ ನೆಲಕ್ಕೆ ಇಳ್ದು ಹೋಯ್ತು, ಅಲ್ವಾ? ಛೆಕ್...

Friday, January 18

ಭಯಂಕರ ಖಾರ ಮಾರಾಯ್ರೇ...

ಮಾನವ ಸಂಘಜೀವಿ.
ಸಂಘ ಅಂತ ಹೇಳಿದ್ರೆ ಆರೆಸ್ಸೆಸ್ಸ್ ಅಂತ ಮಾರ್ಕಿಷ್ಟುಗಳು ತಿಳ್ಕೊಳ್ತಾರೆ. 
ಒಂಟಿಜೀವಿಯಾಗಿ ಮನುಷ್ಯ ಬದುಕೂದು ಭಾರೀ ಕಷ್ಟ,ಹಿಮಾಲಯದ ತಪಸ್ವಿಗಳಂತಹವರನ್ನು ಬಿಟ್ಟು. 
ಬುದ್ಧಿ ಬೆಳವಣಿಗೆ ಆದಂದಿನಿಂದ ಸಮೂಹಮಾಧ್ಯಮದ ಪ್ರಗತಿ ಆಗಿಕೋಂಡು ಬಂತು. ತಂತ್ರಜ್ಞಾನದ ಪ್ರಗತಿಯಿಂದಾಗಿ ಇದು ಇನ್ನೂ ಬೆಳ್ದುಕೋಂಡು ಉಂಟು. ಮೊದಮೊದಲಿನ ಕೈ-ಸನ್ನೆಗಳು, ಮತ್ತೆ ಮಾತುಗಳು, ಗಿರಿಜನರ ನಗಾರಿ ಸಂಕೇತಗಳು, ಯನ್ಸೀಸಿ ಯವರ ಕಮಾಂಡುಗಳು, ನೌಕೆಯವರ ಸೆಮಫೊರ್ ಗಳು -ಎಲ್ಲವೂ ಕಮ್ಯುನಿಕೆಶನಿನ ಮೇಲೆ ಆದ ನಿರಂತರ ಪ್ರಗತಿಯ ಫಲಿತಾಂಶವೇ. ಇದೆಲ್ಲರಿಗೂ ಗೊತ್ತುಂಟು, ಹೈಸ್ಕೂಲಿನಲ್ಲಿ ಪ್ರಬಂಧ ಬರೀವಾಗ ಬಾಯಿಪಾಠ ಮಾಡಿರ್ತಾರೆ. 
ಮಂಗ್ಳೂರಿನ ನಮಿಗೆಲ್ಲ ಸಂತೋಷದ ಸುದ್ದಿ ಎಂತ ಹೇಳಿದ್ರೆ, ಎರಡು ಖಾಸಗಿ ಬಾನುಲಿ ಕೇಂದ್ರಗಳು (ರೇಡಿಯೋ ಸ್ಟೇಷನ್ ಗಳು) ಆರಂಭವಾಗಿವೆ. ಒಂದು ರೇಡಿಯೋ ಮಿರ್ಚಿ ಇನ್ನೊಂದು ಅಂಬಾನಿಯ ಬಿಗ್-ಎಫ್ ಎಮ್.

ಹೋಟೇಲಿನಲ್ಲಿ, ಆಪೀಸಿನಲ್ಲಿ, ಬಾರಿನಲ್ಲಿ, ಗಡಂಗಿನಲ್ಲಿ , ಎಲ್ಲ ಕಡೆಯಲ್ಲೂ ನಮ್ಮ ಕೇಳುಗರೇ ಇರಬೇಕೂ ಅಂತ ಕಂಬ್ಳದ ಗೋಣಗಳ ಹಾಗೆ ದಾಳಿ ಮಾಡಿಕೋಂಡು ಇದ್ದಾರೆ.

ಗಾಂಭೀರ್ಯ ಹಾಗೂ ತೂಕದ ನಿರೂಪಣೆ, ಕಾರ್ಯಕ್ರಮಗಳಿಂದಾಗಿ ಹಳ್ಳಿಗರ ಮನಸ್ಸಿನಲ್ಲಿ ಅಚ್ಚೊತ್ತಿರುವ ಆಕಾಶವಾಣಿಯ ಎದುರು ಈ ರೇಡಿಯೋಗಳ ಹಾವಳಿ ಕಂಡಾಬಟ್ಟೆ ಆಗಿ ಕಾಣ್ತಾ ಉಂಟು. ಶನಿವಾರದ "ಮಾತುಕತೆ", ಯುವರಂಗ, ಯಕ್ಶಗಾನ, ಕಾರ್ಯಕ್ರಮಗಳ ಹಾಗೆ ಇರುವ ಮಂಗ್ಳೂರು ಸಂಸ್ಕೃತಿಗೆ ಹಾಸುಹೊಕ್ಕಾಗಿರುವ ಕರ್ಯಕ್ರಮಗಳು ಆಕಾಶವಾಣಿಗೆ ತೂಕ ಕೊಡ್ತಾ ಉಂಟು. 
ರೇಡಿಯೋ ಮಿರ್ಚಿ ಯ ನಿರೂಪಣೆ ಬಹಳ ವಿಚಿತ್ರ ಕಾಣ್ಬಹುದು ನಮ್ಮ ಊರಿನ ಅಜ್ಜ - ಅಜ್ಜಿಯಂದಿರಿಗೆ. ಆ ಆರ್.ಜೆಗಳ ಕೆಲವು ಶೈಲಿ, ಸೇಲೆಗಳು ಅಂತೂ ಹಿಡಿಸಲಾರದಷ್ಟು ಒಗದಿಕೆ /ವಾಕರಿಕೆ ತರಿಸ್ತದೆ.
ಅವರು ಮೈಕ್ಕದ ಮುಂದೆ ಕೈಕ್ಕಂಜಿಗಳಂತೆ ಪೆರ್ಚಿ ಕಟ್ಟೂದು ನೋಡಿದ್ರೆ ಅದನ್ನು "ರೇಡಿಯೋ ಪೆರ್ಚಿ" ಅಂತ ಹೇಳ್ಳಿಕ್ಕೂ ಸಾಕು.
ಎಂತದ್ದೇ ಇರ್ಲಿ ಮಾರಾಯ್ರೆ, ಮಂಗ್ಳೂರಿನ ನೀರು ಕುಡಿವ ಈ ಬಾನುಲಿ ನಿಲಯಗಳು ಅಲ್ಲಿನ ನೀರು, ಮಣ್ಣು, ಸಂಸ್ಕೃತಿ ಮತ್ತೆ ಜನಜೀವನ ಬಿಂಬಿಸುವ ಹೆಚ್ಚು ಹೆಚ್ಚು ಕಾರ್ಯಕ್ರಮ ಕೊಡ್ಳಿ. ಬೆಂಗ್ಳೂರಿನ ಕೀಳು ಅಭಿರುಚಿಯ ಕಾರ್ಯಕ್ರಮದ "ಪೆರ್ಚಿ" ಗಳಾಗದೆ, ತೂಕದ, ಮನಮುದದ ಮನರಂಜನೆಯ ರೇಡಿಯೋ ಸ್ಟೇಷನ್-ಗಳು ಆಗ್ಲಿ ಅಂತ ಹಾರೈಕೆ.


ಒಂಭೈನೂರ ನಲ್ವತ್ತ ನಾಲ್ಕೂ...


ನಮ್ಮೂರು ಅಂತ ಹೇಳಿದ್ರೆ ಅದೊಂದು ಹಳ್ಳಿ. ಪುತ್ತೂರು ಗೊತ್ತುಂಟಲ್ಲ, ಅಲ್ಲಿಂದ ಕುಕ್ಕೆ ಸುಬ್ರಮಣ್ಯದ ಕಡೆಗೆ ಹೋಗುವಾಗ ಸಿಕ್ತದೆ ನಮ್ಮೂರು. ಆ ಹಳ್ಳಿಯ ಹೆಸರು ಮಾಡಾವು ಅಂತ. (ಜಗತ್ಪ್ರಸಿದ್ಧ ಮುತ್ತಪ್ಪರೈಗಳೂ ಮಾಡಾವಿನವರೇ, ಧೈರ್ಯ ಇದ್ರೆ ಕೇಳಿ ನೋಡಿ :-) ) ಒಂದು ದಶಕದಲ್ಲಿ ಅದ್ಭುತ ಪ್ರಗತಿ ಕಂಡ ಒಂದು ಊರು ಅದು.

ಆಗಿನ ಅಲ್ಲಿನ ಪರಿಸ್ಥಿತಿ ನೋಡಿ:
ಮಮ್ಮುಂಙಿ ಬ್ಯಾರಿಯ ಅಂಗಡಿ ಇತ್ತು, ಮನೆಯ ಪಕ್ಕದ ಕೋಣೆಯೇ (ಈಗಿನ ಕಾಲದ ಲಿವಿಂಗ್ ರೂಮು) ಅಂಗಡಿ , ಹಳ್ಳಿ ವೈದ್ಯರಾದ ಬಲ್ಯಾಯರು ಇದ್ರು, ಮಂತರಿಸುವ ಕಂಪ ರಾಮಣ್ಣ ಇದ್ರು, ಅಷ್ಟೇ. ಹೆಚ್ಚಿನ ರೋಗಗಳೆಲ್ಲ ಅವರಲ್ಲೆ ಗುಣವಾಗುತ್ತಿತ್ತು, ಅದರಿಂದಲೂ ದೊಡ್ಡ ಅನಾರೋಗ್ಯ ಬಂದರೆ ರಾಮಚಂದ್ರ ಡಾಕುಟ್ರ ಆಸ್ಪತ್ರೆ ಇತ್ತು, ಅವರು ಕೊಡುತ್ತಿದ್ದ "ಚೆಮ್ಮದ ಚೀಪೆ ಮರ್ದ್" ಎಲ್ಲದಕ್ಕೂ ಸ ’ರಾಮ’ ಬಾಣ ವಾಗುತ್ತಿತ್ತು.

ಒಂದು ಎಕ್ಷೇಂಜು ಇರ್ಲಿಲ್ಲ ನೋಡಿ, ಎಕ್ಷೇಂಜು ಅಂದ್ರೆ ದೂರವಾಣಿ ವಿನಿಮಯ ಕೇಂದ್ರ ಅಂತ. ದೂರದ ತಿಂಗಳಾಡಿಯಿಂದ ಸಂಪರ್ಕ ಬರ್ತಾ ಇದ್ದದ್ದು. ಮೂರು ಮೈಲಿ ದೂರದ ಅಂಕತ್ತಡ್ಕದಲ್ಲಿ ಒಂದು ಪೋನು
ಕನೆಕ್ಷನ್ ಇತ್ತು -ಯಸ್ಟೀಡಿ (ಯಸ್.ಟಿ.ಡಿ ಬೂತ್) ಅಂತ ಹೆಸರು. ಅಲ್ಲಿ ಸ ಹಾಗೆ, ಸಾಮಾನ್ಯವಾಗಿ ಫೋನು ಮಾಡ್ಬೇಕಾದವನ ಹತ್ರ ಒಂದು ಚೀಟು ಇರ್ತಿತ್ತು, ಅದರಲ್ಲಿ ನಂಬರು ಇರ್ತಿತ್ತು. ಆಪರೇಟರ್ ಅದನ್ನು ಒತ್ತಿ ಮಾತನಾಡ್ಳಿಕ್ಕೆ ಇವರ ಹತ್ರೆ ಕೊಡ್ತಾ ಇದ್ದದ್ದು ಕ್ರಮ. ಹೋದವನೇ ಪೋನು ನಂಬರ್ ಒತ್ತುತ್ತಾನೆಂತಾದರೆ ಅವನಿಗೆ ಗೌರವ ಸಲ್ಲಿಯೇ ಸಲ್ಲುತ್ತಿತ್ತು.
ಬಿಲ್ಲು ಸ ಹಾಗೆಯೇ, ಈಗಿನ ಹಾಗೆ ಪ್ರಿಂಟಾಗಿ ಒಪ್ಪವಾಗಿ ಬರ್ತಿರ್ಲಿಲ್ಲ. ಪ್ರಿಂಟ್ ಆಗಿ ಬರುವುದು ಪುಸ್ತಕವೋ, ಪೇಪರೋ ಅಲ್ಲ ಸರ್ಕಾರೀ ದಾಖಲೆಗಳೋ ಇತ್ಯಾದಿ ಮಾತ್ರ. ಪೋನು ಬಿಲ್ಲಿನಷ್ಟು ಸಣ್ಣವಿಷಯ ಸ ಪ್ರಿಂಟು ಆಗ್ತದೆ ಅಂತ ಗ್ರೇಶಿಯೂ ಇರಲಿಲ್ಲ. ಓಪರೇಟರ್ ನ ಹತ್ತಿರ ಒಂದು ಟೈಂಪೀಸು ಕ್ಲೋಕ್ ಇರ್ತಿತ್ತು. ಅದರಲ್ಲೇ ಸಮಯ ನೋಡಿಕೋಂಡು, ಗುಣಿಸಿ, ತನ್ನ ಮನೆಯ ತಾಪತ್ರಯಗಳನ್ನೆಲ್ಲ ನೆನೆದುಕೊಂದು ಒಂದು ಸಂಖ್ಯೆ ಹೇಳುತ್ತಿದ್ದ. ಪೋನು ಮಾಡೂದೂ ಅಪರೂಪ ಅಲ್ವಾ? ಎಷ್ಟು ಆಗ್ಭೌದು ಅಂತ ಕಲ್ಪನೆ ಇರ್ಲಿಲ್ಲ. ಹೇಳಿದ್ದನ್ನು ಕೊಟ್ಟು ಬರುತ್ತಿದ್ದರು.
ಹೆಚ್ಚಿಲ್ಲ ೧೦ ವರ್ಶದ ಹಿಂದಿನ ಮಾತು, ನನ್ನ ಅಣ್ಣ ಪುತ್ತೂರು ಕೋಲೇಜಿನಲ್ಲಿ ಪೀಯೂಸಿ ಮಾಡಿ, "ಇಂಜಿನಿಯರು ಕಲೀಲಿಕ್ಕೆ" ಅಂತ ಶಿವಮೊಗ್ಗಕ್ಕೆ ಹೋದ ಸಂದರ್ಭ. ನಮ್ಮ ಮನೆಯಲ್ಲಿ ಆಗಿನ್ನೂ ಪೋನು ಆಗಿರ್ಲಿಲ್ಲ. ಯಥಾಪ್ರಕಾರ ಅಂಕತ್ತಡ್ಕಕ್ಕೆ ಹೋಗ್ಬೇಕಿತ್ತು. ಅಂಕತ್ತಡ್ಕದ ಯಸ್ಟೀಡಿ ಬೂತು ಕೂಡಾ ಸ್ವಲ್ಪ ಆಧುನಿಕವಾಗುತ್ತಿತ್ತು.

೦೮೧೮೨... ಅಂತ ಆ ಓಬೀರಾಯನ ಕಾಲದ ತಿರುಮಣೆಯನ್ನು ತಿರುವಿ ತಿರುವಿ ಡಯಲಿಸಿ, ನಿವೃತ್ತಿಯ ಪ್ರಾಯದ ಆ ಪೋನು ಕಟಕಟನೆ ಹಲ್ಲು ಕಡಿಯುತ್ತಾ (ಪಲ್ಸ್ ಡಯಲಿಂಗ್) ಕನೆಕ್ಟ್ ಆಗುತ್ತಿತ್ತು. ನಾವು ಒತ್ತಿದ ನಂಬರು ಸರಿ ಉಂಟಾ ಇಲ್ವಾ ಅಂತ ಸ ನೋಡ್ಳಿಕ್ಕೆ ದಾರಿ ಇರ್ಲಿಲ್ಲ. ರಿಂಗ್ ಆಗ್ತಿತ್ತು, "ಹ್ಹಲೋ. . ಹಾಸ್ಟೆಲ್ ಅಲ್ವಾ?, ... ರನ್ನು ಕರೀತೀರೋ?, ೨ ನಿಮಿಷದಲ್ಲಿ ಪುನಃ ಮಾಡ್ತೇನೆ" ಅಂತ ಹೇಳಿ ಒಮ್ಮೆಗೆ ಕಟ್ ಮಾಡೂದು. ಎರಡು ನಿಮಿಷ ಬಿಟ್ಟು ಪುನಃ ಒತ್ತುದು, ರಿ-ಡಯಲಿಂಗ್ ಸ ಇರ್ಲಿಲ್ಲಾಗಿತ್ತು! "ಲೈನ್ ಬ್ಯುಸಿ" ಇದ್ರೆ, ’ಪೋನು ತಾಗುಜ್ಜಿ’ ಅಂತ ಮತ್ತೆ ಅದೇ ಕಾರ್ಯ. ಅಂತೂ ಇಂತೂ ಪೋನು ಸಿಕ್ಕಿ ಮಾತಾಡಿ ಅಪ್ಪ, ಅಮ್ಮ, ತಂಗೆ ಎಲ್ಲರ ಸುದ್ದಿ ಹೇಳಿದ ನಂತರ ’ಇನ್ನು ಬರುವ ವಾರ ಮಾತಾಡುವ’ ಅಂತ ನನ್ನ ಬೀಯಸ್ಯೇ- ಎಸ್ಸೆಲ್ಲಾರ್ ಸೈಕಲನ್ನು ಹತ್ತಿ ಪುನಹ ಮನೆಗೆ ಬರೂದು.
ಮುಂದೆ ಮನೆಗೆ ಪೋನು ಆದ ನಂತರ ಈ ಆನಂದ ಸಂಪೂರ್ಣವಾಗಿ ತಪ್ಪಿತು. :) 
ಅನಂತರ ಮೊಬೈಲ್ ಯುಗ, ಎಲ್ಲರಿಗೂ ಗೊತ್ತುಂಟು. ನಾನು ಕೋಲೇಜಿನಲ್ಲಿರುವಾಗ ಬೆಂಗ್ಳೂರಿನಲ್ಲಿ ಕೆಲಸದಲ್ಲಿದ್ದ ಅಣ್ಣ ಮನೆಗೆ ಅಂತ ಒಂದು ಮೊಬೈಲು ಕೊಟ್ಟ. ಆಗ ಪುತ್ತೂರಿನ ಪೇಟೆಯಲ್ಲಿ ರೇಂಜು ಸಿಕ್ತಿತ್ತು, ಹೊರಗೆ ಬಂದ್ರೆ ಗೋವಿಂದ! ಇನ್ನು ಮಾಡಾವಿನ ಪ್ರಶ್ನೆ ಬಿಡಿ, ಮೊಬೈಲು ಇದ್ರೆ ಸುಣ್ಣ ತುಂಬಿಸ್ಲಿಕ್ಕೆ ಕೂಡಾ ಆಗ್ತಿರ್ಲಿಲ್ಲ. ಆದ್ರು ಸ ಅನಂತ್ರ ಸಂಪರ್ಕ ತುಂಬ ಸುಲಭ ಆಯ್ತು. ಹೀಗಿದ್ದ ನಮ್ಮ ಮಾಡಾವು- ಕಳೆದ ೬ ತಿಂಗಳಿನಿಂದ ಮೊಬೈಲಿಗೆ ಪುಲ್ಲ್ ರೇಂಜು ಹತ್ತಿಸಿಕೊಂಡು ಉಂಟು. ಹತ್ತಿರದ ಸವಣೂರಿನಲ್ಲಿ ಟವರು ಆಗಿದೆ ಅಂತೆ. ಮಾಡಾವು ಎಕ್ಷ್ಚೇಂಜಿನವರೂ ಜಾಗೆ ತೆಗ್ದಿದ್ದಾರಂತೆ. ಇನ್ನು ಮಾಡಾವಿನಲ್ಲಿ ಸ ಟವರು ಆಗ್ತದೆ ಅಂತೆ.
ಮಮ್ಮುಂಙಿ ಬ್ಯಾರಿಯ ಪುಳ್ಳಿ ಮೊನ್ನೆ ಸಿಕ್ಕಿ ಹೇಳಿದ "ನನಿಗೆ ಸ ಮೊಬೈಲು ಆಗಿದೆ, ನಂಬರು ಬರ್ಕೊಳ್ಳಿ ಆಯ್ತಾ.. ಒಂಭೈನೂರ ನಲ್ವತ್ತನಾಲ್ಕೂ . . . "
ಒಂದು ಸಲ ಹಳೆಯ ಪೋನಿನ ಕಥೆಗಳೆಲ್ಲ ನೆಂಪಾಯ್ತು. ಬೆಳವಣಿಗೆ ನೋಡಿ ಖುಷಿ ಆಯ್ತು.
ಹ್ಯಾಟ್ಸಫ್ ಇಂಡಿಯಾ...